HEALTH TIPS

ಯುರೋಪ್, ಅಮೇರಿಕಾಗಳಲ್ಲಿ ಕೊರೊನಾ ಆರ್ಭಟಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ!


      ನ್ಯೂಯಾರ್ಕ್ : ಡೆಡ್ಲಿ ನೋವೆಲ್ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಮೊದಲು ಚೀನಾದಲ್ಲಿ ಆರ್ಭಟಿಸಿದ ಕೊರೊನಾ ಬಳಿಕ ಯೂರೋಪ್ ಮತ್ತು ಅಮೇರಿಕಾದಲ್ಲಿ ಅಬ್ಬರಿಸಿ ಬೊಬ್ಬಿರಿಯಿತು. ಅಂಕಿ ಅಂಶಗಳ ಪ್ರಕಾರ, ಕೋವಿಡ್-19 ಗೆ ಹೆಚ್ಚು ಜನ ಬಲಿಯಾಗಿರುವುದು ಯೂರೋಪ್ ಮತ್ತು ಅಮೇರಿಕಾದಲ್ಲಿ.! ಹೀಗ್ಯಾಕೆ ಎಂದು ಅಧ್ಯಯನ ಕೈಗೊಂಡಾಗ ಸಿಕ್ಕ ಅಂಶ ನೀವೆಲ್ಲ ಬೆಚ್ಚಿಬೀಳುವಂಥದ್ದು. ನೋವೆಲ್ ಕೊರೊನಾ ವೈರಸ್ ರೂಪಾಂತರಗೊಂಡಿದ್ದು, ಅದರ ಹೊಸ ಆವೃತ್ತಿ ಮೂಲ ವೈರಸ್ ಗಿಂತ ಡೇಂಜರಸ್ ಎಂಬುದು ತಿಳಿದುಬಂದಿದೆ.
     ರೂಪಾಂತರಗೊಂಡ ಕೊರೊನಾ ವೈರಸ್ ನ ಹೊಸ ಆವೃತ್ತಿ ಫೆಬ್ರವರಿ ತಿಂಗಳಲ್ಲಿ ಯೂರೋಪ್ ನಲ್ಲಿ ಕಾಣಿಸಿಕೊಂಡಿದೆ. ಬಳಿಕ ಅದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲೂ ಹಬ್ಬಿ, ಮಾರ್ಚ್ ಮಧ್ಯ ಭಾಗದ ಹೊತ್ತಿಗೆ ವಿಶ್ವದಾದ್ಯಂತ ಹರಡಿದೆ. ''ಆರಂಭಿಕ ದಿನಗಳಲ್ಲಿ ಹರಡಿದ ಮೂಲ ವೈರಸ್ ಗಿಂತ ಈಗ ವಿಶ್ವದೆಲ್ಲೆಡೆ ಹಬ್ಬಿರುವ ರೂಪಾಂತರಗೊಂಡಿರುವ ಹೊಸ ಆವೃತ್ತಿ ಹೆಚ್ಚು ಸಾಂಕ್ರಾಮಿಕವಾಗಿದೆ. ಅದು ವೇಗವಾಗಿ ಪ್ರಸರಣವಾಗುತ್ತದೆ. ಹೊಸ ಆವೃತ್ತಿಯ ವೈರಸ್ ನಿಂದಾಗಿ ಈಗಾಗಲೇ ಗುಣಮುಖರಾಗಿರುವವರು ಎರಡನೇ ಬಾರಿ ಸೋಂಕಿಗೆ ತುತ್ತಾಗಬಹುದು'' ಎಂಬ ಭಯಾನಕ ಅಂಶ ಲಾಸ್ ಅಲಾಮೋಸ್ ನ್ಯಾಷನಲ್ ಲ್ಯಾಬೊರೇಟರಿಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ.
  ಯುರೋಪ್ ಮತ್ತು ಯು.ಎಸ್.ಎ ನಲ್ಲಿ ರೂಪಾಂತರಗೊಂಡ ವೈರಸ್ ಹರಡಿದ ಪರಿಣಾಮ, ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಹಾಗೇ, ಸಾವಿನ ಪ್ರಮಾಣ ಕೂಡ ಅಧಿಕವಾಗಿದೆ.
     ಹೊಸ ಆವೃತ್ತಿ ಮೇಲೂ ಲಸಿಕೆ ಪರಿಣಾಮಕಾರಿಯಾಗಿರಬೇಕು:
     BioRxiv ಎಂಬ ವೆಬ್ ತಾಣದಲ್ಲಿ ವಿಜ್ಞಾನಿಗಳು 33 ಪುಟಗಳ ಅಧ್ಯಯನದ ವರದಿಯನ್ನು ಪ್ರಕಟ ಮಾಡಿದ್ದಾರೆ. ವರದಿಯಲ್ಲಿ ಗುರುತಿಸಲಾದ ರೂಪಾಂತರ ಹೊಂದಿರುವ ಹೊಸ ಆವೃತ್ತಿಯಲ್ಲಿನ ಸ್ಪೈಕ್ ಗಳು ಮಾನವನ ಉಸಿರಾಟದ ಕೋಶಗಳಿಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ, ಪ್ರಪಂಚದಾದ್ಯಂತ ಅಭಿವೃದ್ಧಿ ಹೊಂದುತ್ತಿರುವ ಲಸಿಕೆಗಳು ಮತ್ತು ಔಷಧಿಗಳು ರೂಪಾಂತರ ಹೊಂದಿರುವ ಹೊಸ ಆವೃತ್ತಿಯ ಮೇಲೂ ಪರಿಣಾಮ ಬೀರಬೇಕು ಎಂದು ವಿಜ್ಞಾನಿಗಳು ತುರ್ತು ಅಗತ್ಯದ ವಾರ್ನಿಂಗ್ ಕೊಟ್ಟಿದ್ದಾರೆ.
    ಮೂಲ ತಳಿಗಿಂತ ಅಪಾಯಕಾರಿ:
      ರೂಪಾಂತರಗೊಂಡ ಹೊಸ ಆವೃತ್ತಿ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದೆ. ಇದು ಚೀನಾದ ವುಹಾನ್ ನಿಂದ ಹೊರಬಂದ ಮೂಲ ತಳಿಗಿಂತ ಅಪಾಯಕಾರಿಯಾಗಿದ್ದು, ಹೆಚ್ಚು ಜನರಿಗೆ ಬೇಗ ಸೋಂಕು ತಗುಲಲು ಕಾರಣವಾಗಿದೆ. ಸದ್ಯ ಕೆಲವು ದೇಶಗಳಲ್ಲಿ ರೂಪಾಂತರದ ಆವೃತ್ತಿಯೇ ಪ್ರಬಲವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
        14 ರೂಪಾಂತರಗಳನ್ನು ಗುರುತಿಸಿರುವ ವಿಜ್ಞಾನಿಗಳು :
      ಜರ್ಮನಿಯ 'ಗ್ಲೋಬಲ್ ಇನಿಶಿಯೇಟಿವ್ ಫಾರ್ ಶೇರಿಂಗ್ ಆಲ್ ಇನ್ಫ್ಲುಯೆನ್ಝಾ ಡೇಟಾ' ಸಂಸ್ಥೆ ಸಂಗ್ರಹಿಸಿದ 6000ಕ್ಕೂ ಹೆಚ್ಚು ಕೊರೊನಾ ವೈರಸ್ ಅನುಕ್ರಮಗಳನ್ನು ಕಂಪ್ಯೂಟೇಶನ್ ಅನಾಲಿಸಿಸ್ ಮಾಡಿದ ಬಳಿಕ ವರದಿಯನ್ನು ಸಿದ್ಧಪಡಿಸಲಾಗಿದೆ. ಡ್ಯೂಕ್ ವಿಶ್ವವಿದ್ಯಾಲಯ ಮತ್ತು ಇಂಗ್ಲೆಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೆರವಿನೊಂದಿಗೆ ಲಾಸ್ ಆಲಾಮೋಸ್ ತಂಡವು ಕೊರೊನಾ ವೈರಸ್ ನ 14 ರೂಪಾಂತರಗಳನ್ನು ಗುರುತಿಸಿದೆ. ಕೊರೊನಾ ವೈರಸ್ ನ ಜೀನೋಮ್ ಅನ್ನು ರೂಪಿಸುವ ಸುಮಾರು 30 ಸಾವಿರ ಮೂಲ ಜೋಡಿಯ RNA ಗಳಲ್ಲಿ ರೂಪಾಂತರಗಳು ಸಂಭವಿಸಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
     ಇಟಲಿ, ಅಮೇರಿಕಾದಲ್ಲಿ ರೂಪಾಂತರಿತ ತಳಿ :
     ರೂಪಾಂತರಗೊಂಡ ಹೊಸ ಆವೃತ್ತಿಯ ವೈರಸ್ ಫೆಬ್ರವರಿಯ ಕೊನೆಯ ವಾರದಲ್ಲಿ ಇಟಲಿಯಲ್ಲಿ ಕಾಣಿಸಿಕೊಂಡರೆ, ಮಾರ್ಚ್ 15 ರ ಹೊತ್ತಿಗೆ ರೂಪಾಂತರಿತ ವೈರಸ್ ಅಮೇರಿಕಾದಲ್ಲಿ ಪ್ರಾಬಲ್ಯ ಮೆರೆದಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
     ಸಂಶೋಧಕರು ನೀಡಿರುವ ಎಚ್ಚರಿಕೆ :
    ಲಸಿಕೆ ಅಥವಾ ಔ‍ಷಧಿಯಲ್ಲಿನ ಕೆಲವು ಅಂಶಗಳು ವೈರಸ್ ನ ಸ್ಪೈಕ್ ಕ್ರಿಯೆಯನ್ನು ಅಡ್ಡಿಪಡಿಸುತ್ತವೆ. ಮೂಲ ತಳಿಯನ್ನು ಆಧರಿಸಿ ಲಸಿಕೆ ಅಥವಾ ಔಷಧಿಯನ್ನು ತಯಾರಿಸಿದ್ದರೆ, ಅವು ರೂಪಾಂತರಗೊಂಡ ಹೊಸ ಆವೃತ್ತಿಯ ಸ್ಪೈಕ್ ಮೇಲೆ ಪರಿಣಾಮಕಾರಿಯಾಗುವುದಿಲ್ಲ ಎಂದು ಅಧ್ಯಯನದ ಲೇಖಕರು ಎಚ್ಚರಿಕೆ ನೀಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries