ಕೋಟ್ಟಾಯಂ: ಕೊರೊನಾ ರಣಕೇಕೆಯ ಮಧ್ಯೆ ಜನರು ಹೈರಾಣರಾಗಿ ನಲುಗುತ್ತಿದ್ದಾರೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಸಹಿತ ಅನೇಕ ವಿಜ್ಞಾನಿಗಳು ಕೊರೊನಾದ ಜೊತೆ ಹೊಂದಿಕೊಂಡು ಬಾಳಲು ಮನುಷ್ಯ ಕಲಿಯಬೇಕು ಎಂದು ಸಾರಿದೆ. ಹೀಗಾಗಿ ಕೊರೊನಾ ತಡೆಯಲು ಮುಖಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ದೊಡ್ಡ ಲಸಿಕೆ ಎನ್ನುವಂತಾಗಿದೆ ಪರಿಸ್ಥಿತಿ.
ಕೊರೊನಾ ನಿಯಂತ್ರಣದ ಪ್ರಮುಖ ಅಸ್ತ್ರವಾಗಿ ಪ್ರಸ್ತುತ ಮಾಸ್ಕ್ ಮಾತ್ರ ಪರಿಹಾರವಾಗಿದೆ. ಕೆಲವರು ಮಾಸ್ಕ್ ಧರಿಸುವುದಕ್ಕೆ ಇಷ್ಟಪಡುವುದಿಲ್ಲ. ಮಾರುಕಟ್ಟೆಯಲ್ಲಿ ಥರಾವರಿ ಮಾಸ್ಕ್ ಗಳು ಬರುತ್ತಿವೆ. ಮಾಸ್ಕ್‍ಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಡುತ್ತಿವೆ. ಈ ಹಿನ್ನೆಲೆಯಲ್ಲಿ ಕೇರಳದ ಫೆÇೀಟೊಗ್ರಾಫರ್ ಒಬ್ಬರು ಜನರು ಮಾಸ್ಕ್ ಇಷ್ಟಪಡಲಿ ಎಂದು ವಿಶೇಷ ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.
ಏನು ಗೊತ್ತೇ...ಮುಖವೇ ಮಾಸ್ಕ್ ಆಗುತ್ತೆ!:
ಕೇರಳದ ಕೊಟ್ಟಾಯಂನ ಎಡುಮರ್ನೂರ್‍ನಲ್ಲಿ ಡಿಜಿಟಲ್ ಫೆÇೀಟೊಗ್ರಾಫರ್ ಬಿನೇಶ್ ಜಿ ಪಾಲ್ ಎಂಬುವರು ವಿಶಿಷ್ಟ ಮುಖವಾಡವನ್ನು ಅಭಿವೃದ್ಧಿಪಡಿಸಿದ್ದಾರೆ. ಮಾಸ್ಕ್ ಧರಿಸಬೇಕು ಎನ್ನುವ ವ್ಯಕ್ತಿಯ ಫೆÇೀಟೊವನ್ನು ಮಾಸ್ಕ್‍ನಲ್ಲಿ (ಮುಚ್ಚಿದ ಭಾಗವಷ್ಟೇ) ಪ್ರಿಂಟ್ ಮಾಡಲಾಗುತ್ತದೆ. ಇದನ್ನು ಧರಿಸಿದಾಗ ಮಾಸ್ಕ್‍ನಿಂದ ವ್ಯಕ್ತಿ ಮುಖ ಮುಚ್ಚಿಕೊಂಡಿದ್ದಾರೆ ಎನಿಸುವುದಿಲ್ಲ.
ಮೊದಲು ಫೆÇೀಟೊ ನಂತರ ಮಾಸ್ಕ್:
ಮೊದಲು ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಫೆÇೀಟೋ ತೆಗೆಯಲಾಗುತ್ತದೆ. ಬಳಿಕ ಚಿತ್ರವನ್ನು ನಿರ್ದಿಷ್ಟ ಕಾಗದಕ್ಕೆ ವರ್ಗಾಯಿಸಲಾಗುತ್ತದೆ. ಇದರಿಂದ ಚಿತ್ರವು ದೊಡ್ಡದಾಗುತ್ತದೆ. ಅದನ್ನು ಒಂದು ನಿರ್ದಿಷ್ಟ ಮಟ್ಟಕ್ಕೆ ಕತ್ತರಿಸಿ ಹೆಚ್ಚಿನ ಪ್ರಮಾಣದ ತಾಪಮಾನದೊಂದಿಗೆ, ಬಟ್ಟೆಯ ಮಾಸ್ಕ್ ಮೇಲೆ ಅದನ್ನು ಅಂಟಿಸಲಾಗುತ್ತದೆ ಎಂದು ಬಿನೇಶ್ ಜಿ ಪಾಲ್ ಹೊಸ ರೀತಿಯ ಮಾಸ್ಕ್ ತಯಾರಿಸುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವರು.
20 ನಿಮಿಷಗಳಲ್ಲಿ ತಯಾರಿಸಬಹುದು!:
ಫೆÇೀಟೋ ಪ್ರಿಂಟ್ ಮಾಸ್ಕ್‍ನ್ನು 20 ನಿಮಿಷಗಳಲ್ಲಿ ತಯಾರಿಸಬಹುದು. ಒಂದು ಮಾಸ್ಕ್ ಗೆ 60 ರೂ. ದರ ವಿಧಿಸಲಾಗುತ್ತದೆ. ಕಳೆದ ಎರಡು ದಿನಗಳಲ್ಲಿ 1000 ಮುಖವಾಡಗಳನ್ನು ತಯಾರಿಸಿದ್ದೇನೆ. ಇನ್ನೂ 5000 ಕ್ಕೆ ಆರ್ಡರ್‍ಗಳನ್ನು ಪಡೆದುಕೊಂಡಿದ್ದೇನೆ. ಈ ರೀತಿಯ ಮಾಸ್ಕ್‍ಗಳನ್ನು ಯಾರೂ ಈ ಮೊದಲು ಮಾಡಿಲ್ಲ ಎಂದು ಹೇಳುತ್ತಾರೆ ಹತ್ತು ವರ್ಷಗಳಿಂದ ಪೋಟೋಗ್ರಫಿ ವೃತ್ತಿನಿರತರಾದ ಬಿನೇಶ್ ಜಿ ಪಾಲ್.
ಮಿಕ್ಕಿ ಮೌಸ್, ಟಾಮ್ ಮತ್ತು ಜೆರ್ರಿ, ಡೋರಾ, ಚೊಟಾ ಭೀಮ್, ಟೆಡ್ಡಿ ಬಿರ್, ಚಲನಚಿತ್ರ ನಟರು ಮತ್ತು ಪ್ರಾಣಿಗಳ ಚಿತ್ರಗಳನ್ನು ಹೊತ್ತ ವಿವಿಧ ಮುಖವಾಡಗಳನ್ನು ನಾನು ನೋಡಿದ್ದೆ. ಆದರೆ, ಮಾಸ್ಕ್ ಧರಿಸುವ ವ್ಯಕ್ತಿಯ ಚಿತ್ರವೇ ಮಾಸ್ಕ್ ಆದರೆ ಹೇಗೆ ಎಂದು ವಿಚಾರಿಸಿ ನಾನು ಇಂತಹ ಪ್ರಯತ್ನಕ್ಕೆ ತೊಡಗಿಸಿಕೊಂಡೆ ಎಂದು ಬಿನೇಶ್ ತಿಳಿಸಿದ್ದಾರೆ. ಬಿನೇಶ್ ಅವರ ಇಂತಹ ಹೊಸ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.



