HEALTH TIPS

ಬೆಂಬಿಡದ ಕೊರೊನಾ ಭೂತದಿಂದ ಖಿನ್ನತೆಯಲ್ಲಿ ಮುಳುಗಿತಾ ಅಮೆರಿಕಾ?

                ವಾಶಿಂಗ್ಟನ್:  ನೊವೆಲ್ ಕೊರೊನಾ ವೈರಸ್ ಎಂಬ ಪೈಶಾಚಿಕ ರೋಗ ಅಮೆರಿಕಾದಂತಾ ದೈತ್ಯ ರಾಷ್ಟ್ರವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ. ದಿನಂಪ್ರತಿ ಕೊವಿಡ್-19 ಸೋಂಕಿತರ ಸಂಖ್ಯೆ ಸಾವಿರ ಸಾವಿರಗಟ್ಟಲೇ ಏರಿಕೆಯಾಗುತ್ತಿದೆ. ಜಾಗತಿಕ ಸೋಂಕಿತರ ಸಂಖ್ಯೆಯ ಪೈಕಿ ಅಮೆರಿಕಾದಲ್ಲಿ ಶೇ.25ಕ್ಕಿಂತ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ ಅಮೆರಿಕಾದಲ್ಲಿ 79,477 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದರೆ, 13,36,271ಕ್ಕೂ ಅಧಿಕ ಮಂದಿ ಸೋಂಕಿತರಿದ್ದಾರೆ. ಇನ್ನು, ದೇಶದಲ್ಲಿ ಇದುವರೆಗೂ 2,24,991 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.
          ಕೊರೊನಾ ವೈರಸ್ ನಲ್ಲಿ ಸಾವು-ನೋವಿಗಿಂತ ಆಘಾತ ನೀಡುವಂತಾ ಮತ್ತೊಂದು ಬೆಳವಣಿಗೆಯೇ ಆರ್ಥಿಕ ಕುಸಿತ. ವಿಶ್ವದ ದೊಡ್ಡಣ್ಣನ ನೆಲದಲ್ಲಿ ಕಳೆದ ಏಪ್ರಿಲ್ ಒಂದೇ ತಿಂಗಳಿನಲ್ಲಿ 20.5 ಮಿಲಿಯನ್ ಜನರು ಉದ್ಯೋಗ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದಾರೆ.
        ವಿಶ್ವದ ದೊಡ್ಡಣ್ಣನ ನೆಲದಲ್ಲೇ ನಿರುದ್ಯೋಗಕ್ಕೆ ಜನ ಹೈರಾಣ:
      ನೊವೆಲ್ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಕಡಿವಾಣಕ್ಕಾಗಿ ಅಮೆರಿಕಾ ಅನುಸರಿಸಿದ ಲಾಕ್ ಡೌನ್ ವಿಧಾನವೇ ಆರ್ಥಿಕತೆಗೆ ಶಾಪವಾಗಿದೆ. ಕಳೆದ ಎಪ್ರಿಲ್ ತಿಂಗಳಿನಲ್ಲಿ ನಿರುದ್ಯೋಗ ಪ್ರಮಾಣವು ಶೇ.14.7ಕ್ಕೆ ಏರಿಕೆಯಾಗಿದೆ. ಅಮೆರಿಕಾ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ನಿರುದ್ಯೋಗ ಸಮಸ್ಯೆ ಎದುರಾಗಿದ್ದು 37 ವರ್ಷಗಳ ನಂತರ ಎಂದು

             ವಿಶ್ವದ 2ನೇ ಮಹಾಯುದ್ಧ ನೆನಪಿಸಿದ ನಿರುದ್ಯೋಗ ಸಮಸ್ಯೆ:
     ವಿಶ್ವದ ಎರಡನೇ ಮಹಾಯುದ್ಧದ ಬಳಿಕ ಅಮೆರಿಕಾದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿತ್ತು. 1982ರ ನವೆಂಬರ್ ತಿಂಗಳಿನಲ್ಲಿ ನಿರುದ್ಯೋಗದ ಪ್ರಮಾಣ ಅಮೆರಿಕಾದಲ್ಲಿ ಶೇ.10.8ಕ್ಕೆ ಏರಿಕೆಯಾಗಿತ್ತು. ಕಳೆದ ಮಾರ್ಚ್ ತಿಂಗಳಿನಿಂದ ಕೊರೊನಾ ಭೀತಿಯಲ್ಲಿ ಅಮೆರಿಕಾ ಲಾಕ್ ಡೌನ್ ಆಗಿದ್ದು, ನಿರುದ್ಯೋಗ ಸಮಸ್ಯೆ ಈ ದಾಖಲೆಯನ್ನೂ ಮೀರಿಸಿದೆ.
        ಲಾಕ್ ಡೌನ್ ಸಡಿಲಿಕೆಗೆ ಅಧ್ಯಕ್ಷೀಯ ಚುನಾವಣೆ ಕಾರಣ? :
    ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2ನೇ ಬಾರಿ ಮರುಆಯ್ಕೆ ಆಗುತ್ತಾರೋ ಇಲ್ವೋ ಎಂಬ ಅನುಮಾನ ಹುಟ್ಟಿದೆ. ಕೊರೊನಾ ಅಪಾಯದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿಯೂ ಸಹ ಟ್ರಂಪ್ ಆರ್ಥಿಕತೆಗೆ ಶಕ್ತಿ ತುಂಬುವ ನೆಪವನ್ನು ಹೇಳಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದಾರೆ. ನವೆಂಬರ್.03ರಂದು ನಡೆಯುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ದೃಷ್ಟಿಯಲ್ಲಿ ಟ್ರಂಪ್ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಟೀಕೆ ಕೇಳಿ ಬಂದಿದ್ದು, ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಗಿದೆ.

           ಕೃಷಿಯೇತರ ಚಟುವಟಿಕೆಗಳಿಲ್ಲದೇ ನಿರುದ್ಯೋಗ ಹೆಚ್ಚಳ:
     ಅಮೆರಿಕಾದಲ್ಲಿ ಲಾಕ್ ಡೌನ್ ನಿಂದಾಗಿ ಕೃಷಿಯೇತರ ಚಟುವಟಿಕೆಗಳೆಲ್ಲ ಸ್ತಬ್ಧವಾಗಿದೆ. ಇದರಿಂದ ನಿರುದ್ಯೋಗ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಕಳೆದ ಮಾರ್ಚ್ ಗಿಂತ ಮೊದಲು ನೀಡಿದ ವರದಿಯಲ್ಲಿ 7,01,000 ಮಂದಿ ನಿರುದ್ಯೋಗಿಗಳೆಂದು ಗುರುತಿಸಲಾಗಿತ್ತು. ಆದರೆ ಮಾರ್ಚ್ ನಲ್ಲಿ ಈ ಪ್ರಮಾಣವನ್ನು 8,70,000 ಎಂದು ಪರಿಷ್ಕರಿಸಲಾಗಿದೆ. ಕಳೆದ 2010ರ ಅಕ್ಟೋಬರ್ ನಿಂದ ಉದ್ಯೋಗದ ಪ್ರಮಾಣದಲ್ಲಿ ಕಂಡು ಬಂದಿದ್ದ ಏರಿಕೆ ಮಾರ್ಚ್ ನಲ್ಲಿ ಕೊನೆಯಾಯಿತು.
          ರೆಸ್ಟೋರೆಂಟ್ ಬಾರ್ ಗಳಲ್ಲಿ ಕಾರ್ಮಿಕರಿಗೆ ಗೇಟ್ ಪಾಸ್:
       ಕಳೆದ ಎರಡು ತಿಂಗಳಿನಲ್ಲಿ ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. 2011ರ ಫೆಬ್ರವರಿ ನಂತರ ಮೊದಲ ಬಾರಿ ಅತಿಹೆಚ್ಚು ಜನರು ನಿರುದ್ಯೋಗಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಬಾರ್ ಆಂಡ್ ರೆಸ್ಟೋರೆಂಟ್ ಗಳಲ್ಲಿ ಸುಮಾರು 7.7 ಮಿಲಿಯನ್ ಜನರು ಉದ್ಯೋಗ ಕಳೆದುಕೊಂಡು ಮನೆಯಲ್ಲಿದ್ದಾರೆ.

                    ಅಮೆರಿಕಾದಲ್ಲಿ ವೈದ್ಯಕೀಯ ಸಿಬ್ಬಂದಿಗೂ ನಿರುದ್ಯೋಗ :
       ಅಮೆರಿಕಾದಲ್ಲಿ ವೈದ್ಯಕೀಯ ವಲಯಕ್ಕೂ ಕೊರೊನಾ ವೈರಸ್ ಬಿಸಿ ತಟ್ಟಿದೆ. ಖಾಸಗಿ ಹೆಲ್ತ್ ಕೇರ್ ಸೆಂಟರ್, ದಂತ ವೈದ್ಯರು ಮತ್ತು ವೈದ್ಯರ ಖಾಸಗಿ ಆಸ್ಪತ್ರೆಗಳು ಬಂದ್ ಆಗಿವೆ. ಆಯ್ದ ವೈದ್ಯರ ತಂಡವು ಕೊವಿಡ್-19 ಸೋಂಕಿತರ ಚಿಕಿತ್ಸೆಯಲ್ಲಿ ಲಕ್ಷ್ಯ ವಹಿಸಿದ್ದಾರೆ. ಜನರು ಕೊರೊನಾ ಭೀತಿಯಿಂದ ಹೊರ ಬರುವುದನ್ನೇ ಮರೆತಿದ್ದಾರೆ. ಈ ಹಿನ್ನೆಲೆ ಜನರಲ್ ಚೆಕಪ್ ಗಾಗಿ ಆಸ್ಪತ್ರೆಗೆ ಬರುತ್ತಿದ್ದವರ ಸಂಖ್ಯೆ ಇಳಿಕೆಯಾಗಿದೆ. ವೈದ್ಯಕೀಯ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರಿಗೂ ಕೆಲಸವಿಲ್ಲದಂತೆ ಆಸ್ಪತ್ರೆಗಳೆಲ್ಲ ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗ ಮಾಡುತ್ತಿದ್ದ 1.4 ಮಿಲಿಯನ್ ಸಿಬ್ಬಂದಿಯು ನಿರುದ್ಯೋಗಿಗಳಾಗಿದ್ದಾರೆ.
             ತಾತ್ಕಾಲಿಕ ಮತ್ತು ಶಾಶ್ವತ ಉದ್ಯೋಗದಲ್ಲಿ ಕಡಿತ :
    ಕೇಂದ್ರ ಕಾರ್ಮಿಕ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಕಳೆದ ತಿಂಗಳಿನಲ್ಲೇ ಪುನರ್ ಸ್ಥಾಪನಾ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪರಸ್ಥಿತಿ ಸಹಜಗತಿಗೆ ಮರಳುತ್ತಿದೆ ಎಂದು ಸಮೀಕ್ಷಾ ವರದಿಯು ತಿಳಿಸಿದೆ. ಶಾಶ್ವತ ಮತ್ತು ತಾತ್ಕಾಲಿಕ ವ್ಯಾಪಾರ ಬಂದ್ ಆಗಿದ್ದರಿಂದ ಹೆಚ್ಚಿನ ಉದ್ಯೋಗ ಕಡಿತವಾಗುತ್ತಿದೆ. ಬೀದಿಬದಿಗಳಲ್ಲಿ ವ್ಯವಹಾರದಲ್ಲಿ ತೀವ್ರ ಏರಿಕೆಯಾಗಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

        

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries