ಉಪ್ಪಳ: ಪೈವಳಿಕೆ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹೆಸರಲ್ಲಿರುವ ವಾಟ್ಸ್‍ಆಫ್ ಗುಂಪಲ್ಲಿ ಅಶ್ಲೀಲ ವೀಡಿಯೋಗಳನ್ನು ಪೋಸ್ಟ್ ಮಾಡಿದ ಮೊಬೈಲ್ ನಂಬ್ರ ಪಾಕಿಸ್ಥಾನ ಮೂಲದ್ದಾಗಿದೆ ಎಂಬ ಆತಂಕಕಾರಿ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ಬಾಯಾರಿನ ಇತಿಹಾಸ ಪ್ರಸಿದ್ದ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಹೆಸರಲ್ಲಿರುವ ವಾಟ್ಸ್‍ಆಫ್ ಗುಂಪೊಂದರಲ್ಲಿ ಇತ್ತೀಚೆಗೆ ಅಶ್ಲೀಲ ವೀಡಿಯೋಗಳು ಪೋಸ್ಟ್ ಆಗಿದ್ದವು. ಇದರಿಂದ ಶ್ರೀಕ್ಷೇತ್ರದ ಭಕ್ತಾದಿಗಳು ಆಕ್ರೋಶಗೊಂಡಿದ್ದರು. ಈ ಗುಂಪಿನ ಅಡ್ಮಿನ್ ಗಳು ರಾಜಕೀಯ ಪಕ್ಷವೊಂದರ ಕಾರ್ಯಕರ್ತರರಾಗಿದ್ದು, ಶ್ರೀಕ್ಷೇತ್ರಕ್ಕೆ ಅವಮಾನಕರವಾಗುವಂತಹ ಸಂದೇಶಗಳಿಂದ ಭಕ್ತಾದಿಗಳ ಅವಕೃಪೆಗೆ ಒಳಗಾಗಿದ್ದಾರೆ. ತನ್ನ ಪಕ್ಷದವರೇ ಆದ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುಂಪಲ್ಲಿ ಸೇರ್ಪಡೆಗೊಳಿಸಿರುವ ಎಡ್ಮಿನ್ ಶ್ರೀಕ್ಷೇತ್ರದ ಚಟುವಟಿಕೆಗಳನ್ನು ಹೊರತುಪಡಿಸಿ ಇತರ ಸಂದೇಶಗಳ ರವಾನೆಗೇ ಈ ಗುಂಪನ್ನು ಬಳಸಲಾಗುತ್ತಿತ್ತೆಂದು ಇದೀಗ ತಿಳಿದುಬಂದಿದೆ. ಗುಂಪಲ್ಲಿ ಶ್ರೀಕ್ಷೇತ್ರದ ನಿಷ್ಠಾವಂತ ಭಕ್ತರೂ ಸದಸ್ಯರಾಗಿದ್ದು ಇವರೀಗ ತಮ್ಮ ಆಕ್ರೋಶ ವ್ಯಕ್ತಪಡಿಸಿರುವರು.
ಮೇ.22 ರಂದು ಶ್ರೀಕ್ಷೇತ್ರದ ಹೆಸರಲ್ಲಿರುವ ಗುಂಪಲ್ಲಿ ಅಶ್ಲೀಲ ವೀಡಿಯೋಗಳು ಪ್ರಕಟಗೊಂಡಿತ್ತು. ಈ ವಿಡಿಯೋಗಳನ್ನು ಕಳಿಸಿದ ನಂಬರ್ ಪರಿಶೀಲಿಸದಾಗ ಅದು ಪಾಕಿಸ್ಥಾನ ಮೂಲದ ಮೊಬೈಲ್ ಸಂಖ್ಯೆ ಎನ್ನುವ ಆತಂಕಾರಿ ಮಾಹಿತಿ ತಿಳಿದುಬಂದಿದೆ.
ಶ್ರೀಕ್ಷೇತ್ರದ ಸೇವಾ ಸಮಿತಿ, ಕ್ಷೇತ್ರ ಆಡಳಿತ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷತ್ತು ಜಿಲ್ಲಾ ಸಮಿತಿ ಮಂಜೇಶ್ವರ ಪೋಲೀಸರಿಗೆ ದೂರು ನೀಡಿದ್ದಾರೆ.


