ನವದೆಹಲಿ : ಕೊರೊನಾ ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕೆಲಸವನ್ನು (Vande Bharath Mission) ಕೇಂದ್ರ ಸರ್ಕಾರ ಬಿರುಸಿನಿಂದ ನಡೆಸಿದೆ.
ಕಳೆದ ಮೇ 7 ರಿಂದ ಇಲ್ಲಿಯವರೆಗೆ 4000 ಭಾರತೀಯರನ್ನು ವಿದೇಶಗಳಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪುಣ್ಯಾ ಸಲೀಲ ಶ್ರೀವಾತ್ಸವ ಇಂದು ತಿಳಿಸಿದ್ದಾರೆ. ಇದಕ್ಕಾಗಿ 23 ವಿಮಾನಗಳು ಬಳಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಕೊರೊನಾ ಲಾಕ್‌ಡೌನ್ ನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿ ಕೊಡಲು 468 ವಿಶೇಷ ಶ್ರಮಿಕ್ ರೈಲುಗಳನ್ನು ಓಡಿಸಲಾಗಿದೆ. ಐದು ಲಕ್ಷಕ್ಕಿಂತ ಹೆಚ್ಚು ಕಾರ್ಮಿಕರು ಈ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಶ್ರೀವಾತ್ಸವ್ ತಿಳಿಸಿದ್ದಾರೆ. ನಿನ್ನೆ ಒಂದೇ ದಿನ ದೇಶಾದ್ಯಂತ 101 ಶ್ರಮಿಕ್ ರೈಲುಗಳು ಸಂಚರಿಸಿವೆ ಎಂದು ತಿಳಿಸಿದ್ದಾರೆ.
ಕೊರೊನಾ ಲಾಕ್‌ಡೌನ್ ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಸುಮಾರು 2 ಲಕ್ಷ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಮೊದಲ ಹಂತದಲ್ಲಿ 12 ದೇಶಗಳಿಂದ ಸುಮಾರು 15 ಸಾವಿರ ಭಾರತೀಯರನ್ನು 64 ವಿಮಾನಗಳಲ್ಲಿ ಕರೆತರಲಿದೆ. ಮೇ 7 ರಿಂದ ಈ ಕಾರ್ಯಾಚರಣೆ ಆರಂಭವಾಗಿದೆ.


