ಕಾಸರಗೋಡು: ಲಾಕ್ ಡೌನ್ ಕಾಲಾವಧಿಯಲ್ಲಿ ಮದ್ಯದಂಗಡಿ ತೆರೆದು ಕಾರ್ಯಾಚರಿಸುವ ತೀರ್ಮಾನ ಹಿಂತೆಗೆಯುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟು ತಿರಸ್ಕರಿಸಿದೆ. ಮಾತ್ರವಲ್ಲ ಈ ವಿಚಾರದಲ್ಲಿ ಯಾವುದೇ ಆದೇಶ ನೀಡುವುದಿಲ್ಲವೆಂದೂ ನ್ಯಾಯಾಲಯ ತಿಳಿಸಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್‍ಲೈನ್ ಮೂಲಕ ಮನೆಬಾಗಿಲಿಗೆ ಮದ್ಯ ಪೂರೈಕೆ ವಿಚಾರದ ಬಗ್ಗೆ ಆಯಾ ರಾಜ್ಯಗಳು ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದೆ. ಈ ವಿಚಾರಗಳ ಬಗ್ಗೆ ರಾಜ್ಯ ಸರ್ಕಾರಗಳು ತೀರ್ಮಾನ ಕೈಗೊಳ್ಳುವಂತೆಯೂ ಸೂಚಿಸಿದೆ. ಸುಪ್ರೀಂ ಕೋರ್ಟಿನ ಈ ಆದೇಶ, ಕೇರಳ ಸರ್ಕಾರ ಈ ಹಿಂದೆ ಕೈಗೊಂಡಿದ್ದ ಆನ್‍ಲೈನ್ ಮದ್ಯಪೂರೈಕೆ ತೀರ್ಮಾನಕ್ಕೆ ಮರುಜೀವಪಡೆದಂತಾಗಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯ ಲಭ್ಯವಾಗದೆ ಶಾರೀರಿಕ ಅಸೌಖ್ಯ ಕಾಣಿಸಿಕೊಂಡವರಿಗೆ ವೈದ್ಯರ ಶಿಫಾರಸಿನ ಮೇರೆಗೆ ಮನೆಗಳಿಗೆ ಮದ್ಯ ಪೂರೈಕೆಗೆ ಕೇರಳ ಅಬಕಾರಿ ಇಲಾಖೆ ಈ ಹಿಂದೆ ತೀರ್ಮಾನಿಸಿತ್ತು. ವೈದ್ಯರ ಶಿಫಾರಸುಪತ್ರ ಪ್ರಕಾರ ಒಬ್ಬರಿಗೆ ವಾರಕ್ಕೆ ಮೂರು ಲೀ. ಲಿಕ್ಕರ್ ಲಭ್ಯವಾಗಿಸಲು ತೀರ್ಮಾನಿಸಲಾಗಿತ್ತು. ಇದನ್ನು ಬೀವರೇಜಸ್ ಔಟ್‍ಲೆಟ್‍ನ ನಿಗದಿತ ಬೆಲೆಗೆ ಪೂರೈಕೆ ಮಾಡಲು ಹಾಗೂ ಇದಕ್ಕಾಗಿ ನೂರು ರೂ. ಸರ್ವೀಸ್ ಚಾರ್ಜ್ ನಿಗದಿಪಡಿಸಿ, ಹೆಚ್ಚು ಬೆಲೆಯಿಲ್ಲದ ರಮ್ ಮತ್ತು ಬ್ರಾಂಡಿ ಮಾತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿತ್ತು. ಮದ್ಯ ಮನೆಬಾಗಿಲಿಗೆ ವಿತರಣೆಗಾಗಿ ಒಂದು ವಾಹನದಲ್ಲಿ ಇಬ್ಬರು ಸಿಬ್ಬಂದಿಯನ್ನು ಕಳುಹಿಸುವುದರ ಜತೆಗೆ ಈ ವಾಹನಕ್ಕೆ ಗುರುತಿನ ಚೀಟಿ ಹಾಗೂ ಸಿಬ್ಬಂದಿ ಸನಿಹದ ಪೊಲೀಸ್ ಠಾಣೆಯ ಅನುಮತಿ ಪತ್ರ ಹೊಂದಿರಬೇಕು. ಮದ್ಯ ಸಾಗಾಟದ ವಾಹನಕ್ಕೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಬೆಂಗಾವಲು ಪಡೆಯಬೇಕೆಂದು ಬೀವರೇಜಸ್ ಕಾರ್ಪೋರೇಶನ್ ಎಂ.ಡಿ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದರು.
ಬೀವರೇಜಸ್ ಕಾರ್ಪೊರೇಶನ್ ವೇರ್‍ಹೌಸ್‍ಗೆ ಒಂದು ದಿನದಲ್ಲಿ ತಲುಪುವ ಪಾಸ್‍ಗಳ ಆಧಾರದಲ್ಲಿ ಒಂದೇ ಬಾರಿಗೆ ಮದ್ಯ ಪೂರೈಸಬೇಕು. ಸಂಚರಿಸಬೇಕಾದ ದೂರ, ಪಾಸ್‍ಗಳ ಒಟ್ಟು ಸಂಖ್ಯೆ ಆಧರಿಸಿ ವಾಹನ ಗೊತ್ತುಪಡಿಸುವ ಜವಾಬ್ದಾರಿಯನ್ನು ಆಯಾ ವೇರ್‍ಹೌಸ್ ಪ್ರಬಂಧಕರಿಗೆ ವಹಿಸಿಕೊಡಲಾಗಿತ್ತು. ಅಗತ್ಯವಿದ್ದಲ್ಲಿ ಇಬ್ಬರಿಗಿಂತ ಹೆಚ್ಚಿನ ಸಿಬ್ಬಂದಿಯನ್ನೂ ಮದ್ಯ ಪೂರೈಕೆಗೆ ನಿಯೋಜಿಸಬಹುದಾಗಿತ್ತು. ಆಯಾ ದಿನದ ಮದ್ಯ ಸ್ಟಾಕ್ ಲೆಕ್ಕಾಚಾರ ಕಂಪ್ಯೂಟರ್ ಪ್ರೋಗ್ರಾಮರ್‍ನಲ್ಲಿ ನಮೂದಿಸಿರಬೇಕೆಂದೂ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಆದರೆ ಈ ತೀರ್ಮಾನಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.





