ಕಾಸರಗೋಡು: ಲಾಕ್ ಡೌನ್ ಕಾರಣ ಶಾಲಾರಂಭಗೊಳ್ಳಲು ತಡವಾಗುವ ಹಿನ್ನೆಲೆಯಲ್ಲಿ ಪ್ರಸ್ತುತ ಸಾಲಿನ ವಿದ್ಯಾಭ್ಯಾಸ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಕೂಲತೆ ಉಂಟಾಗಬಾರದೆಂಬ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಆರಂಭಿಸಿರುವ ವಿಕ್ಟರ್ಸ್ ಚಾನಲ್ ಆನ್ ಲೈನ್ ಶಿಕ್ಷಣ ವಿದ್ಯಾರ್ಥಿಗಳಿಗೆ ಕಲಿಕಾ ಮಟ್ಟದ ಉನ್ನತಿಗೆ ಪ್ರಭಾವ ಬೀರುತ್ತಿದೆ. ಆದರೆ ಗಡಿನಾಡು ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮವಿಲ್ಲದೆ ಪ್ರಸ್ತುತ ಹೈಸ್ಕೂಲು ವಿಭಾಗ ಹೊರತುಪಡಿಸಿ ಒಂದನೇ ತರಗತಿಯಿಂದ ಏಳನೇ ತರಗತಿ ಮತ್ತು ಹೈಯರ್ ಸೆಕೆಂಡರಿ ತರಗತಿಗಳಿಗೆ ತೊಡಕಾಗಿದೆ. ಈ ಮಧ್ಯೆ ಒಂದನೇ ತರಗತಿಯಿಂದ ಏಳನೇ ತರಗತಿ ಕನ್ನಡ ಮಾಧ್ಯಮ ಆನ್ ಲೈನ್ ಶಿಕ್ಷಣದ ಯತ್ನಗಳು ಪ್ರಗತಿಯಲ್ಲಿದೆ.
ಆದರೆ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣಕ್ಕೆ ಕನ್ನಡ ಅಥವಾ ಆಂಗ್ಲ ಮಾಧ್ಯಮದ ವ್ಯವಸ್ಥೆ ಇನ್ನೂ ತಯಾರಾಗಿಲ್ಲ. ಈ ಹಿನ್ನೆಲೆಯಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ, ರಂಗಕರ್ಮಿ ಎಂ.ಉಮೇಶ ಸಾಲ್ಯಾನ್ ಅವರು ಶಾಸಕ ಎಂ.ರಾಜಗೋಪಾಲನ್ ಅವರ ಮೂಲಕ ಸರ್ಕಾರದ, ಹೈಯರ್ ಸೆಕೆಂಡರಿ ವಿದ್ಯಾಭ್ಯಾಸ ವಿಭಾಗದ ಉನ್ನತ ಅಧಿಕಾರಿಗಳಿಗೆ, ಉನ್ನತ ಶಿಕ್ಷಣ ಸಚಿವರಿಗೆ ಈ ಬಗ್ಗೆ ಅಗತ್ಯ ಕ್ರಮಕ್ಕೆ ಮನವಿ ನೀಡಿ ಆಗ್ರಹಿಸಿರುವರು. ಈ ಹಿನ್ನೆಲೆಯಲ್ಲಿ ಶಾಸಕ ರಾಜಗೋಪಾಲನ್ ಅವರು ಆಸಕ್ತಿ ವಹಿಸಿ ಶಿಕ್ಷಣ ಸಚಿವರ ಮೂಲಕ ಹೈಯರ್ ಸೆಕೆಮಡರಿಗೆ ಸಂಬಂಧಿಸಿ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಅಥವಾ ಆಂಗ್ಲ ಮಾಧ್ಯಮದಲ್ಲಿ ಆನ್ ಲೈನ್ ಶಿಕ್ಷಣ ಒದಗಿಸುವ ಬಗ್ಗೆ ಮಾತುಕತೆ ನಡೆಸಿ ಸಕಾರಾತ್ಮಕ ಪ್ರಕ್ರಿಯೆಗಳನ್ನು ಪಡೆದಿರುವರೆಂದು ತಿಳಿದುಬಂದಿದೆ. ಈ ವ್ಯವಸ್ಥೆಗಳು ಸಫಲವಾದರೆ ಮುಂದಿನ ಎರಡು-ಮೂರು ವಾರಗಳಲ್ಲಿ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಕನ್ನಡ ಅಥವಾ ಆಂಗ್ಲ ಮಾಧ್ಯಮದಲ್ಲಿ ಆನ್ ಲೈನ್ ಶಿಕ್ಷಣ ಸಾಫಲ್ಯತೆ ಕಾಣಲಿದೆ ಎಂದು ಎಂ.ಉಮೇಶ ಸಾಲ್ಯಾನ್ ತಿಳಿಸಿರುವರು.



