ನವದೆಹಲಿ: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಕೇಂದ್ರ ಸರ್ಕಾರವು ಅನ್ ಲಾಕ್-3.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ನಡುವೆಯೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತಕ್ಕೆ ಕೆಲವು ಅಧಿಕಾರಗಳನ್ನು ನೀಡಲಾಗಿದೆ.
ಜುಲೈ.31ರಂದು ಅನ್ ಲಾಕ್ 2.0 ಅವಧಿ ಅಂತ್ಯಗೊಳ್ಳುವ ಹಿನ್ನೆಲೆ ಹೊಸ ಮಾರ್ಗಸೂಚಿಯನ್ನು ರಿಲೀಸ್ ಮಾಡಲಾಗಿದೆ. ಭಾರತದಾದ್ಯಂತ ಆಗಸ್ಟ್.01ರಿಂದ ಆಗಸ್ಟ್.30ರವರೆಗೂ ಅನ್ ಲಾಕ್ 3.0 ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ಕಂಟೇನ್ಮೆಂಟ್ ಝೋನ್ ಗಳಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಕ್ರಮ ತೆಗೆದುಕೊಳ್ಳುವುದಕ್ಕೆ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರಗಳಿಗೂ ಹೊಣೆಯನ್ನು ನೀಡಲಾಗಿದೆ.
ಕಂಟೇನ್ಮೆಂಟ್ ಝೋನ್ ಗಳಲ್ಲಿ ಯಾವೆಲ್ಲ ಸೌಲಭ್ಯಗಳಿಗೆ ಅನುಮತಿ ನೀಡಬೇಕು. ಯಾವ ಕಂಟೇನ್ಮೆಂಟ್ ಝೋನ್ ಗಳಲ್ಲಿ ಯಾವ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಬೇಕು. ರಾಜ್ಯದೊಳಗೆ ಮತ್ತು ಹೊರರಾಜ್ಯಗಳಿಗೆ ಬಸ್ ಸಂಚಾರ ಮತ್ತು ಅಗತ್ಯ ಸರಕು-ಸೇವೆಗಳ ರಫ್ತು ಮತ್ತು ಆಮದಿಗೆ ಸಂಬಂಧಿಸಿದಂತೆ ತೀರ್ಮಾನಗಳನ್ನು ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕಂಟೇನ್ಮೆಂಟ್ ಝೋನ್ ಗಳ ಪಟ್ಟಿಯನ್ನು ಆಯಾ ಜಿಲ್ಲಾಡಳಿತದ ವೆಬ್ ಸೈಟ್, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ ಮಾಡುವುದು. ಹಾಗೂ ಕಂಟೇನ್ಮೆಂಟ್ ಝೋನ್ ಗಳ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಮಾಹಿತಿ ನೀಡುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.


