ತಿರುವನಂತಪುರ: ಒಂದು ವರ್ಷದ ಹಿಂದೆ ಮಹಾರಾಷ್ಟ್ರದಿಂದ ಹೊರಟ ಈ ಟ್ರಕ್ ಅಂತಿಮವಾಗಿ ತನ್ನ ಗಮ್ಯಸ್ಥಾನವನ್ನು ಭಾನುವಾರ ತಲುಪಿದೆ. ಏರೋ ಸ್ಪೇಸ್ ಆಟೋಕ್ಲೇವ್ ಮೆಷಿನ್ ಎಂಬ ಪರೀಕ್ಷಾ ವ್ಯವಸ್ಥೆಯನ್ನು ಹೊಂದಿರುವ ದೈತ್ಯ ಟ್ರಕ್ ತಿರುವನಂತಪುರಂನ ವಟ್ಟಿಯೂರ್ ಕಾವ್ ನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಆಗಮಿಸಿದೆ.
2019 ರ ಜುಲೈನಲ್ಲಿ ಮುಂಬೈಯ ಥಾಣೆ ಅಂಬರ್ನಾಥ್‍ನಿಂದ ಹೊರಟ ಈ ಟ್ರೈಲರ್ ಭಾನುವಾರವಷ್ಟೆ ತಿರುವನಂತಪುರಕ್ಕೆ ಆಗಮಿಸಿತು. ಅಂಬರ್ನಾಥ್‍ನಲ್ಲಿರುವ ಯೂನಿಕ್ ಇಂಕ್ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ಈ ಯಂತ್ರವು 70 ಟನ್‍ಗಳಷ್ಟು ಬೃಹತ್ತಾದ ಭಾರ ಹೊಂದಿದೆ. 7.5 ಮೀಟರ್ ಎತ್ತರ ಮತ್ತು 6.65 ಮೀಟರ್ ಅಗಲವಿರುವ ಈ ವಾಹನವು 74 ಚಕ್ರಗಳ ಟ್ರೈಲರ್ ಹೊಂದಿದೆ.
ಚೆನ್ನೈ ಮೂಲದ ಜಿಪಿಆರ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಯಂತ್ರವನ್ನು ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸುವ ಒಪ್ಪಂದ ಮಾಡಿಕೊಂಡಿತ್ತು. ಯಂತ್ರದ ಎತ್ತರದಿಂದಾಗಿ ಹಡಗಿನ ಮೂಲಕ ತಲುಪಿಸಲು ಅಸಾಧ್ಯ ಎಂದು ಕಂಡುಕೊಂಡು ರಸ್ತೆ ಮೂಲಕ ತಲಪಿಸುವ ಕಠಿಣ ಕಾರ್ಯವನ್ನು ಕೈಗೊಳ್ಳಲಾಯಿತು.
ವಾಹನವು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದಿಂದ ಹೊರಟು ಕೇರಳಕ್ಕೆ ಒಟ್ಟು ನಾಲ್ಕು ರಾಜ್ಯಗಳ ಮೂಲಕ ಸಂಚಾರ ನಡೆಸಿ ಆಗಮಿಸಿತು. ನಾಸಿಕ್‍ನಿಂದ ಆಂಧ್ರಪ್ರದೇಶದ ಮೂಲಕ ಸೇಲಂ, ಕನ್ಯಾಕುಮಾರಿ ಮತ್ತು ತಮಿಳುನಾಡಿನ ತಿರುನೆಲ್ವೇಲಿವರೆಗೆ ಪ್ರಯಾಣಿಸುತ್ತಿತ್ತು. ಕಳೆದ 20 ದಿನಗಳ ಹಿಂದೆ ಕೇರಳ ಗಡಿಯನ್ನು ತಲುಪಿತು. ರಾತ್ರಿಯ ವೇಳೆ ಮತ್ತು ಮುಂಜಾನೆಯ ಜನದಟ್ಟಣೆ ಇಲ್ಲದ ಸಮಯದಲ್ಲಿ ಮಾತ್ರ ಈ ವಾಹನ ಸಂಚರಿಸಿತ್ತು. ಗಂಟೆಗೆ ಐದರಿಂದ ಆರು ಕಿಲೋಮೀಟರ್ ವೇಗದಲ್ಲಿ ಸಂಚರಿಸಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
ವಾಹನದ ಸುಗಮ ಸಂಚಾರಕ್ಕೆ ಪೆÇಲೀಸರು ಮತ್ತು ವಿದ್ಯುತ್ ಮಂಡಳಿ ಎಲ್ಲಾ ಪ್ರದೇಶಗಳಲ್ಲೂ ಸಕ್ರಿಯವಾಗಿ ಸಹಾಯ ಮಾಡಿದೆ. ದಾರಿಗೆ ತೊಡಕಾಗುತ್ತಿದ್ದ ಮರಗಳ ಕೊಂಬೆಗಳನ್ನು ಕತ್ತರಿಸಿ, ವಿದ್ಯುತ್ ತಂತಿಗಳನ್ನು ನಿವಾರಿಸಿ ಈ ವಾಹನ ಕೊನೆಗೂ ಗಮ್ಯಸ್ಥಾನ ತಲಪಿದೆ.
ಕೋವಿಡ್ ಲಾಕ್ ಡೌನ್ ಸಂದರ್ಭ ಕನ್ಯಾಕುಮಾರಿ ಬಳಿಯ ಸುಚೀಂದ್ರಂನಲ್ಲಿ ಎರಡು ತಿಂಗಳುಗಳ ಕಾಲ ಈ ವಾಹನವನ್ನು ನಿಲುಗಡೆಒಳಿಸಬೇಕಾದ ಸಂದರ್ಭ ಬಂದಿತೆಂದು ತಿಳಿದುಬಂದಿದೆ. ಇದರಿಂದಾಗಿ ಕೇರಳಕ್ಕೆ ತಲಪುವುದು ಇನ್ನಷ್ಟು ವಿಳಂಬವಾಯಿತು. ಬಾಹ್ಯಾಕಾಶ ಕೇಂದ್ರದಲ್ಲಿ ಯಂತ್ರವನ್ನು ಇಳಿಸಿದ ಬಳಿಕ ನೌಕರರು ಹಿಂತಿರುಗುವರು ಎಂದು ಅಧಿಕೃತರು ತಿಳಿಸಿದ್ದಾರೆ.


