ಮಂಜೇಶ್ವರ: ಅಂತರ್ ರಾಜ್ಯ ನಿತ್ಯ ಸಂಪರ್ಕದ ಉದ್ಯೋಗಿಗಳಿಗೆ ಅನುಮತಿಸಿರುವ ಪಾಸ್ ವ್ಯವಸ್ಥೆಯನ್ನು ಸೋಮವಾರ ಕಾಸರಗೋಡು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಕಂದಾಯ ಸಚಿವರ ಉನ್ನತ ಮಟ್ಟದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಹಠಾತ್ ರದ್ದುಗೊಳಿಸಿದ್ದರಿಂದ ಮಂಗಳವಾರ ಬೆಳಿಗ್ಗೆ ದಕ್ಷಿಣ ಕನ್ನಡದ ವಿವಿಧೆಡೆ ಸಂಚರಿಸುವ ನಿತ್ಯ ಪ್ರಯಾಣಿಕರು ತಲಪಾಡಿಯಲ್ಲಿ ದಿಕ್ಕೆಟ್ಟು ಬಳಿಕ ಸಂಘರ್ಷಾವಸ್ಥೆ ಸೃಷ್ಟಿಯಾದ ಘಟನೆ ನಡೆದಿದೆ.
ಪ್ರತಿನಿತ್ಯ ದಕ್ಷಿಣ ಕನ್ನಡದ ವಿವಿಧೆಡೆಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಿದ್ದ ಜನರಿಗೆ ಕಾಸರಗೋಡು ಜಿಲ್ಲಾಡಳಿತದ ದಿಢೀರ್ ನಿರ್ಧಾರ ಆಘಾತ ತರಿಸಿದ್ದು, ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ, ಮಂಗಳೂರು, ಪುತ್ತೂರು ಮೊದಲಾದ ಕಡೆ ಕರ್ನಾಟಕದ ವಿವಿಧೆಡೆ ಪ್ರತಿನಿತ್ಯ ಉದ್ಯೋಗ ನಿಮಿತ್ತ ಹೋಗಿ ಬರುತ್ತಿದ್ದವರು ಇನ್ನು ಹಾಗೆ ಮಾಡುವಂತಿಲ್ಲ ಒಮ್ಮೆ ಕರ್ನಾಟಕಕ್ಕೆ ಹೋದರೆ ಮುಂದಿನ 28 ದಿನ ಅಲ್ಲೇ ಇರಬೇಕು ಎಂಬ ಕೇರಳ ಸರಕಾರ ನಿಯಮ ಗೊಂದಲಕ್ಕೆ ಕಾರಣವಾಗಿದೆ.
ಡೈಲಿ ಪಾಸ್ ಮೂಲಕ ನಿತ್ಯವೂ ಕೆಲಸಕ್ಕೆ ಬರುತ್ತಿದ್ದವರನ್ನು ಕೇರಳ ಪೆÇಲೀಸರು ತಲಪಾಡಿಯಲ್ಲಿ ತಡೆಹಿಡಿದಿರುವುದರಿಂದ ಸ್ಥಳದಲ್ಲಿ ಜಮಾಯಿಸಿದ ಸುಮಾರು 100 ಕ್ಕೂ ಅಧಿಕ ಮಂದಿ ಪೆÇಲೀಸರ ಜೊತೆ ವಾಗ್ವಾದಕ್ಕೆ ಇಳಿದಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕೇರಳ ಸರ್ಕಾರ ಸೋಮವಾರ ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದು ಅನಾವಶ್ಯಕ ಪ್ರಯಾಣ ತಡೆಯುವ ನಿಟ್ಟಿನಲ್ಲಿ ಗಡಿ ರಸ್ತೆಯಲ್ಲಿ ಬ್ಯಾರಿಕೆಡ್ ಇರಿಸಿ ನಿಬರ್ಂಧ ಹೇರಲಾಗಿದೆ. ಆದರೆ ದ.ಕ ಜಿಲ್ಲಾಡಳಿತವೂ ಜು.11 ರ ಪಾಸ್ ನೀಡಿದ್ದು ಅಲ್ಲಿಯವರೆಗೆ ಮಂಗಳೂರಿಗೆ ಬರುವ ಮಂದಿ ಕೇರಳದ ಉದ್ಯೋಗಿಗಳನ್ನು ತಡೆಯಬಾರದು ಎಂದು ಜನರು ಪೆÇಲೀಸರನ್ನು ಒತ್ತಾಯಿಸಿದ್ದಾರೆ. ಆದರೆ ಮಂಗಳೂರಿಗೆ ಪ್ರಯಣಿಸುತ್ತಿದ್ದ ಐದು ಮಂದಿಯಲ್ಲಿ ಕೋವಿಡ್ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ಕಠಿಣ ಆದೇಶ ಇರುವುದರಿಂದ ಮಂಗಳೂರಿಗೆ ಹೋದಲ್ಲಿ ಅಲ್ಲಿಯೇ ಉಳಿದುಕೊಳ್ಳಿ ಎಂದು ಕೇರಳ ಪೆÇಲೀಸರು ತಿಳಿಸಿದ್ದಾರೆ.
ಇದರಿಂದ ಪೆÇಲೀಸರ ಹಾಗೂ ಜನರ ನಡುವೆ ವಾಗ್ವಾದ ನಡೆದಿದ್ದು ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣ ಆಗಿದೆ. ಹೆಚ್ಚುವರಿ ಪೆÇಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ರಾಜಕೀಯ ಬೇಳೆ ಬೇಯಿಸುವವರೂ ಇದ್ದಾರೆ:
ಈ ಮಧ್ಯೆ ಮಂಗಳೂರಿಗೆ ತೆರಳಲು ದಿಕ್ಕು ಕಾಣದೆ ಕಂಗೆಟ್ಟ ಪ್ರಯಾಣಿಕರಿಗೆ ಬೆಂಬಲ ಸೂಚಿಸಿ ಬಿಜೆಪಿ ಹಾಗೂ ಯುಡಿಎಫ್ ತೆರೆಮರೆಯಲ್ಲಿ ಪ್ರತಿಭಟನೆ ಸಂಘಟಿಸಿರುವುದು ಕಂಡುಬಂದಿದೆ. ರಾಜ್ಯ ಸರ್ಕಾರದ ಅಪಕ್ವ ನಿರ್ಧಾರದಿಂದ ಹಿಂದೆ ಸರಿಯಬೇಕು, ನಿತ್ಯ ಪ್ರಯಾಣಿಕರ ಸಂಚಾರಕ್ಕೆ ತಡೆಯೊಡ್ಡಿರುವುದರ ಹಿಂದೆ ಸ್ವ ಹಿತಾಸಕ್ತಿ-ನಂಜಿನ ರಾಜಕೀಯವನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದ್ದು ಅದನ್ನು ಕೈಬಿಡಬೇಕೆಂದು ಎರಡೂ ರಾಜಕೀಯ ಬಣಗಳು ಪ್ರತಿಭಟಿಸುತ್ತಿರುವುದು ಸಭ್ಯ ನಾಗರಿಕರ ತಲೆಕೆಡಿಸುವಂತೆ ಮಾಡಿದೆ. ಸಾಂಕ್ರಾಮಿಕ ಕೋವಿಡ್ ವ್ಯಾಪಕತೆಯಲ್ಲೂ ರಾಜಕೀಯ ಬೇಳೆ ಬೇಯಿಸುವ ಕುತ್ಸಿತ ಮನೋಸ್ಥಿತಿ ಸರಿಯಲ್ಲ ಎಂಬ ಮಾತುಗಳೂ ಕೇಳಿಬಂದಿದೆ.
ಆದರೂ...ಸಂಚಾರ ನಿರಾಳವಾಗಿದೆ!:
ವಿಶೇಷವೆಂದರೆ ತಲಪ್ಪಾಡಿ ಅಂತರ್ ರಾಜ್ಯ ಗಡಿಯ ಸಮೀಪದಿಂದ ತಿರುಗಿ ಸಾಗುವ ಒಳ ರಸ್ತೆಯೊಂದರ ಮೂಲಕ ತಲಪ್ಪಾಡಿ ದೇವೀನಗರದಲ್ಲಿ ಹೆದ್ದಾರಿಗೆ ಸೇರುವ ರಸ್ತೆ ಮೂಲಕ ಮಂಗಳವಾರವೂ ಅವ್ಯಾಹತವಾಗಿ ಅಕ್ರಮ ಸಂಚಾರ ನಡೆದಿರುವುದು ಕಂಡುಬಂದಿದೆ. ಈ ಬಗ್ಗೆ ಜಿಲ್ಲಾಡಳಿತವೂ ಕಂಡೂ ಕಾಣದಂತೆ ವರ್ತಿಸುತ್ತಿರುವುದು ಸಂಶಯಗಳೀಗೂ ಕಾರಣವಾಗಿದೆ. ತಲಪ್ಪಾಡಿಯಲ್ಲಿ ಹೆದ್ದಾರಿ ಮೂಲಕ ಸಂಚಾರ ಅನುವುಮಾಡಬೇಕೆಂದು ಪ್ರತಿಭಟನೆ ನಡೆಯುತ್ತಿರುವಂತೆ ಒಳ ರಸ್ತೆಯ ಮೂಲಕ ವಾಹನಗಳು ನಿಬಿಡತೆಯಿಂದ ಸಂಚರಿಸಿರುವುದು ಕೋವಿಡ್ ಹರಡುವಿಕೆಯನ್ನು ತೀವ್ರ ಬಾಧಿಸಲಿದೆ ಎಂದು ವಿಶ್ಲೇಶಿಸಲಾಗಿದೆ.


