ಕಾಸರಗೋಡು: ಕಾಸರಗೋಡು ಜಿಲ್ಲೆಯ ಜನತೆ ಇನ್ನು ಸಮಾಧಾನ ತಾಳಬಹುದು. ನಿರಂತರವಾಗಿ ಕಂಗೆಡಿಸಿದ ಕೋವಿಡ್ ಸೋಂಕಿನ ವಿರುದ್ಧ ರಾಜ್ಯ ಸರಕಾರ ನಡೆಸುತ್ತಿರುವ ಸತತ ಪ್ರತಿರೋಧಕ್ಕೆ ಪ್ರಬಲ ಹೆಗಲುಗಾರಿಕೆ ನೀಡಲು, ಆರೋಗ್ಯ ಇಲಾಖೆಯ ಪ್ರತಿರೋಧ ಚಟುವಟಿಕೆಗಳಿಗೆ ಬಲವರ್ಧನೆ ಒದಗಿಸಲು ಟಾಟಾ ಕೋವಿಡ್ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ. ಈಗ ನಿರ್ಮಾಣ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲಪಿದೆ.
ಕಾಸರಗೋಡು ಜಿಲ್ಲೆಯ ತೆಕ್ಕಿಲ್ ಗ್ರಾಮದಲ್ಲಿ ಈ ಆಸ್ಪತ್ರೆಯ ನಿರ್ಮಾಣ ಇದೀಗ ತ್ವರಿತ ಗತಿಯಿಂದ ನಡೆದು ಬರುತ್ತಿದೆ. ಜುಲೈ ತಿಂಗಳಕೊನೆಯ ವಾರದಲ್ಲಿ ನಿರ್ಮಾಣ ಪೂರ್ತಿಗೊಳಿಸಿ ರಾಜ್ಯ ಸರಕಾರಕ್ಕೆ ಆಸ್ಪತ್ರೆಯನ್ನು ಹಸ್ತಾಂತರಿಸುವ ಉದ್ದೇಶಗಳಿವೆ. ಕೊರೋನಾ ಸೋಂಕಿನ ಆರಂಭದ ಹಂತದಲ್ಲಿ ಅತ್ಯಧಿಕ ಕೇಸ್ ಗಳು ವರದಿಯಾದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಗೆ ರಾಜ್ಯ ಸರಕಾರದ ಸಹಾಯದೊಂದಿಗೆ ಟಾಟಾ ಸಮೂಹ ಸಂಸ್ಥೆ ಕೊಡುಗೆಯಾಗಿ ಈ ಅತ್ಯಾಧುನಿಕ ಸೌಲಭ್ಯಗಳ ಆಸ್ಪತ್ರೆಯನ್ನು ನೀಡಿದೆ.
ಪ್ರತಿ ಮುಗ್ಗಟ್ಟಿನ ಸಮಯದಲ್ಲೂ ಜಿಲ್ಲಾಡಳಿತೆ ಮತ್ತು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನೀಡಿರುವ ಸಹಾಯ-ಸಹಕಾರ ಅತಿವೇಗದಲ್ಲಿ ಆಸ್ಪತ್ರೆಯ ನಿರ್ಮಾಣ ಪೂರ್ಣತೆಗೆ ಕಾರಣವಾಗಿದೆ ಎಂದು ಟಾಟಾ ಸಮೂಹ ಸಂಸ್ಥೆಗಳ ಯೋಜನೆ ಆಡಳಿತಾಧಿಕಾರಿ ಆಂಟನಿ ಪಿ.ಎಲ್. ತಿಳಿಸಿದರು.
3 ವಲಯಗಳು- 540 ಹಾಸಿಗೆಗಳು:
ಟಾಟಾ ಕೋವಿಡ್ ಆಸ್ಪತ್ರೆ ಯ ನಿರ್ಮಾಣ ಪೂರ್ತಿಗೊಂಡ ವೇಳೆ ಆಸ್ಪತ್ರೆಯನ್ನು 3 ವಲಯ(ಝೋನ್) ಗಳಾಗಿ ವಿಭಜಿಸಲಾಗುವುದು. ಝೋನ್ ನಂಬ್ರ 1 ಮತ್ತು 3 ರಲ್ಲಿ ಕೋವಿಡ್ ಕ್ವಾರೆಂಟೈನ್ ಸೌಲಭ್ಯಗಳೂ, ಝೋನ್ ನಂಬ್ರ 2ರಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳ ವಿಶೇಷ ಐಸೊಲೇಷನ್ ಸೌಲಭ್ಯಗಳು ಸಜ್ಜುಗೊಳ್ಳಲಿವೆ. ಝೋನ್ 1 ಮತ್ತು 3 ರ ಪ್ರತಿ ಕಂಟೈನರ್ ಗಳಲ್ಲೂ ತಲಾ 5 ಹಾಸುಗೆಗಳು, ಒಂದು ಶೌಚಾಲಯ, ಝೋನ್ 2ರ ಯೂನಿಟ್ ಗಳಲ್ಲಿ ಶೌಚಾಲಯ ಸಹಿತದ ತಲಾ ಒಂದು ಕೊಠಡಿಗಳೂ ಇರುವುವು. ಒಂದು ಯೂನಿಟ್ 40 ಅಡಿ ಉದ್ದ, 10 ಅಡಿ ಅಗಲವಿರುವುದು. ರಸ್ತೆ, ಸ್ವಾಗತ ಕೊಠಡಿ ಸೌಲಭ್ಯ, ಕ್ಯಾಂಟೀನ್, ವೈದ್ಯರ ಮತ್ತು ದಾದಿಯರ ಪ್ರತ್ಯೇಕ ಕೊಠಡಿಗಳು ಸಹಿತ ಎಲ್ಲ ಸೌಲಭ್ಯಗಳೊಂದಿಗೆ ಆಸ್ಪತ್ರೆ ಸಜ್ಜುಗೊಳ್ಳಲಿದೆ.
ಸರ್ಕಾರಿ ವ್ಯವಸ್ಥೆಯಲ್ಲಿ ಟಾಟಾ ಕೊಡುಗೆ:
ತೆಕ್ಕಿಲ್ ಗ್ರಾಮದ 5 ಎಕ್ರೆ ಜಾಗ, ಜಲ, ವಿದ್ಯುತ್ ಸಹಿತ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ರಾಜ್ಯ ಸರಕಾರ ಮತ್ತು ಕಾಸರಗೋಡು ಜಿಲ್ಲಾಡಳಿತೆ ಒದಗಿಸುತ್ತಿದೆ. ಆಸ್ಪತ್ರೆ ಯೂನಿಟ್ ಗಳು ಸಹಿತ ಎಲ್ಲ ನಿರ್ಮಾಣಗಳನ್ನೂ ಟಾಟಾ ಸಮೂಹ ಸಂಸ್ಥೆ ಉಚಿತವಾಗಿ ಒದಗಿಸುತ್ತಿದೆ. ದೇಶದ ವಿವಿಧೆಡೆ ಟಾಟಾ ಸಮೂಹ ಸಂಸ್ಥೆ ಇಂಥಾ ಆಸ್ಪತ್ರೆಗಳನ್ನು ಯುದ್ಧ ಕಾಲದ ಹಿನ್ನೆಲೆಯಲ್ಲಿ ನಿರ್ಮಿಸಿ ಒದಗಿಸಿದ್ದರೂ, ಕೇರಳ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾಸರಗೋಡು ಜಿಲ್ಲೆಯಲ್ಲಿ ಈ ಸೌಲಭ್ಯ ಲಭಿಸುತ್ತಿದೆ.
3 ತಿಂಗಳ ಅವಧಿಯಲ್ಲಿ ನಿರ್ಮಾಣ: 50 ಕಾರ್ಮಿಕರು:
ಈ ವರ್ಷ ಏಪ್ರಿಲ್ ತಿಂಗಳ 28,29ರಂದು ಈ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಜುಲೈ 30ರಂದು ನಿರ್ಮಾಣ ಪೂರ್ತೀಕರಣದ ಗುರಿ ಇರಿಸಲಾಗಿದೆ. ಒಟ್ಟು 50 ಮಂದಿ ಕಾರ್ಮಿಕರು ಇಲ್ಲಿ ಕಾಯಕ ನಡೆಸುತ್ತಿದ್ದಾರೆ. ಇವರಲ್ಲಿ ಅಧಿಕ ಮಂದಿ ಉತ್ತರ ಭಾರತೀಯರೇ ಇದ್ದಾರೆ. ಬಹಪಾಲು ಕಾಮಗಾರಿ ಯಂತ್ರ ಮೂಲಕವೇ ನಡೆದುಬರುತ್ತಿವೆ.
ಒಂದು ಹಂತದಲ್ಲಿ ಪ್ರತಿಕೂಲ ವಾತಾವರಣ, ಕೋವಿಡ್ ಸೋಂಕು ಹಾವಳಿ, ಕಾರ್ಮಿಕರು ಊರಿಗೆ ತೆರಳಿದುದು ಎಲ್ಲವೂ ಸಮಸ್ಯೆಯಾಗಿದ್ದುವು. ಆದರೂ ಎಲ್ಲವನ್ನೂ ನಿಭಾಯಿಸಿ ಈಗ ನಿರ್ಮಾಣ ಅಂತಿಮ ಹಂತಕ್ಕೆ ತಲಪಿದೆ ಎಂದು ಟಾಟಾ ಸಮೂಹ ಸಂಸ್ಥೆಯ ಯೋಜನೆ ಆಡಳಿತಾಧಿಕಾರಿ ಆಂಟನಿ ಪಿ.ಎಲ್. ನುಡಿದರು.
ಕೋವಿಡ್ ನಂತರದ ವ್ಯವಸ್ಥೆ:
ಆರಂಭದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಈ ಆಸ್ಪತ್ರೆ ಚಟುವಟಿಕೆ ನಡೆಸಲಿದೆ. ಕೋವಿಡ್ ಪೂರ್ಣರೂಪದಲ್ಲಿ ಪರಿಹಾರಗೊಂಡ ಮೇಲೆ ಯಾವ ರೀತಿ ಈ ಆಸ್ಪತ್ರೆಯನ್ನು ಬಳಸಬೇಕು ಎಂಬುದನ್ನು ರಾಜ್ಯ ಸರಕಾರ ತೀರ್ಮಾನಕ್ಕೆ ಬಿಡಲಾಗಿದೆ ಎಂದು ಆಂಟನಿ ಪಿ.ಎಲ್. ತಿಳಿಸಿದರು.
ಸಿಬ್ಬಂದಿ ನೇಮಕಾತಿ ಇತ್ಯಾದಿ:
ಆಸ್ಪತ್ರೆಯ ಸಿಬ್ಬಂದಿ ನೇಮಕಾತಿ, ಚಿಕಿತ್ಸಾ ಸೌಲಭ್ಯ ಇತ್ಯಾದಿಗಳನ್ನೂ ರಾಜ್ಯ ಸರಕಾರದ ನಿರ್ಧಾರಕ್ಕೆ ಬಿಡಲಾಗಿದೆ ಎಂದವರು ಅಭಿಮತ ವ್ಯಕ್ತಪಡಿಸಿದರು.




