ಉಪ್ಪಳ: ಕೋವಿಡ್ ಸೋಂಕು ಬಾಧೆಯಿಂದ ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಸಾವು ಸಂಭವಿಸಿದ ಹಿದಾಯತ್ ನಗರ ನಿವಾಸಿ ನಫೀಝಾ (75) ಅವರಿಗೆ ಕೊರೊನಾ ವೈರಸ್ ಸೋಂಕಿಗೆ ಕಾರಣ ಸಂಪರ್ಕ ಎಂಬುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಜೂ.19ರಂದು ಕೊಲ್ಲಿರಾಷ್ಟ್ರದಿಂದ ಇವರ ಪುತ್ರ ಆಗಮಿಸಿದ್ದು, 16 ದಿನಗಳ ಸಾಂಸ್ಥಿಕ ನಿಗಾದಲ್ಲಿದ್ದು, ನಂತರ ಮನೆಗೆ ತೆರಳಿದ್ದರು. ಜೊತೆಗೆ ಮೀಂಜ ಪಂಚಾಯತ್ ನಿವಾಸಿಯೊಬ್ಬರು ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದವರು ಜು.7ರಂದು ನಫೀಝಾ ಅವರ ಮನೆಗೆ ಭೇಟಿ ನೀಡಿದ್ದರು. ಅದೇ ದಿನ ನಫೀಝಾ ಮತ್ತು ಅವರ ಸೊಸೆಗೆ ಜ್ವರ, ಶೀತ ಲಕ್ಷಣಗಳು ಕಂಡುಬಂದಿದ್ದು, ಮರುದಿನ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಬಂದು ಗಂಟಲರಸ ತಪಾಸಣೆ ನಡೆಸಿ ಮನೆಗೆ ಮರಳಿದ್ದರು. ಜು.10ರಂದು ಸೊಸೆಗೆ ರೋಗ ಲಕ್ಷಣ ಅಧಿಕಗೊಂಡ ಹಿನ್ನೆಲೆಯಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ನಿಗಾದಲ್ಲಿ ದಾಖಲಾಗಿದ್ದರು. ಇವರ ಪರಿಚರಣೆಗೆ ನಫೀಝಾ ಅವರೇ ಆಸ್ಪತ್ರೆಯಲ್ಲಿದ್ದರು.
ಜು.11ರಂದು ಸೊಸೆಗೆ ಕೋವಿಡ್ 19 ಖಚಿತಗೊಂಡಿತ್ತು. ಅಂದೇ ಇಬ್ಬರನ್ನೂ ಕಾಂಞಂಗಾಡಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ವರೂಪದ ಉಸಿರಾಟದ ತೊಂದರೆ ಮತ್ತು ಮಧುಮೇಹ ರೋಗಿಯೂ ಆಗಿದ್ದ ನಫೀಝಾ ಅವರಿಗೆ ರೋಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಕೃತಕ ಉಸಿರಾಟ ಯಂತ್ರದ ಸಹಾಯದಲ್ಲೇ ಚಿಕಿತ್ಸೆಯಲ್ಲಿದ್ದರು.
ಜು.17ರಂದು ಸಂಜೆ 6.30ರ ವೇಳೆಗೆ ಅವರ ಆರೋಗ್ಯ ಬಿಗಡಾಯಿಸತೊಡಗಿ, ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಅದೇ ದಿನ ರಾತ್ರಿ 9.30ಕ್ಕೆ ಹೃದಯಾಘಾತಕ್ಕೊಳಗಾದ ಅವರು ರಾತ್ರಿ 10.45ಕ್ಕೆ ಕೊನೆಯುಸಿರೆಳೆದಿದ್ದರು. ಇವರ ಕುಟುಂಬದ 8 ಮಂದಿಗೂ, ಸಂಬಂಧಿಕರಾ ಆಗಿರುವ ನೆರೆಮನೆಯ ಒಬ್ಬರಿಗೂ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.


