ಕಾಸರಗೋಡು: ಜಗದಗಲ ತೀವ್ರ ಸಂಕಷ್ಟ ತಂದೊಡ್ಡಿರುವ ಕೋವಿಡ್ ಮಹಾಮಾರಿಯ ಮಧ್ಯೆ ಮಾನಸಿಕವಾಗಿ ಯಾವುದೇ ಗಾಬರಿಗೊಳಗಾಗದೆ ಸಾಂಪ್ರದಾಯಿಕ ಕೃಷಿ ವ್ಯವಸ್ಥೆ ನಿಯಮಿತ ವೇಗದಲ್ಲಿ ಕೈಕೊಡವಿ ಎದ್ದು ಕ್ರಿಯಾತ್ಮಕವಾಗುತ್ತಿದೆ.
ಬಳಾಲ್ ಗ್ರಾ.ಪಂ. ವ್ಯಾಪ್ತಿಯ ಬಳಾಲ್ ಭಗವತಿ ದೇವಸ್ಥಾನ ಪರಿಸರದ ದೇವಸ್ಥಾನ ಒಡೆತನದ ಮತ್ತು ಮಾಲೋಮ್ ಪ್ಯಾಟರ್ ಒಡೆತನದ ಒಟ್ಟು ನಾಲ್ಕು ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೇಸಾಯಕ್ಕೆ ಬಾಲಕೃಷ್ಣನ್ ಪರಂಬತ್, ನಾರಾಯಣನ್ ಮಾಂಪಲ್ಲಂ, ಕುಂಞÂ ರಾಮನ್ ಮುಲ್ಲಚೇರಿ ಮತ್ತು ಸೇತುರಾಜ್, ಕುಕ್ಕನ್ ಅವರುಗಳ ನೇತೃತ್ವದಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೊಸ ಶಖೆಯೊಂದಕ್ಕೆ ನಾಂದಿ ಹಾಡಲಾಗಿದೆ.
ಕೋವಿಡ್ ಮಾನದಂಡಗಳನ್ನು ಅನುಸರಿಸಿ ಗದ್ದೆಗಿಳಿದು ಭತ್ತದ ನಾಟಿಗೆ ಆರಂಭಿಸಲಾಗಿದೆ. ಶಶಿಧರನ್ ಮಾಲೋಮ್ ನಲ್ಲಿ ಒಂದು ಹೆಕ್ಟೇರ್ ಬಂಜರು ಭೂಮಿಯಲ್ಲಿ ಭತ್ತದ ಕೃಷಿ ಮಾಡಲಾಗುತ್ತಿದೆ. ಕೋವಿಡ್ ಕಾರಣ, ಭತ್ತದ ಕೃಷಿಗೆ ಸಂಬಂಧಿಸಿದಂತೆ ವರ್ಷಗಳಿಂದ ನಡೆಯುತ್ತಿದ್ದ ನಾಟಿ ಉತ್ಸವ ಈ ಬಾರಿ ನಡೆಸಿಲ್ಲ. ಕಾರ್ಮಿಕರ ಕೊರತೆಯೂ ಕೃಷಿಯನ್ನು ಕಷ್ಟಕರವಾಗಿಸುತ್ತಿದೆ ಎಂದು ರೈತರು ಹೇಳುತ್ತಾರೆ. ಆದ್ದರಿಂದ ಯಂತ್ರೋಪಕರಣಗಳ ಸಹಾಯದಿಂದ ಕೃಷಿ ಮುನ್ನಡೆಸಲಾಗುತ್ತಿದೆ. ಪರಪ್ಪ ಕೃಷಿ ಸೇವಾ ಕೇಂದ್ರದಿಂದ ಟ್ರ್ಯಾಕ್ಟರ್ ಒದಗಿಸಲಾಗಿದ್ದರೆ, ಪುಲ್ಲೂರ್ ಪೆರಿಯಾ ಕೃಷಿ ಸೇವಾ ಕೇಂದ್ರದಿಂದ ನಾಟಿ ಯಂತ್ರವನ್ನು ಒದಗಿಸಲಾಗಿದೆ. ಅದಿರಾ ಭತ್ತ ತಳಿಯ ಬೀಜಗಳನ್ನು ಬಳಸಿ ನೇಜಿ ಬೆಳೆಸಲಾಗಿದೆ.
ಕೋವಿಡ್ ಕಾಲಘಟ್ಟವು ಇದೀಗ ಮತ್ತೆ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಗೆ ಪುನಶ್ಚೇತನ ನೀಡುವ ಹೊಸ ಕಲ್ಪೆನೆ, ಆಸಕ್ತಿಗಳೊಂದಿಗೆ ಜೀವಪಡೆಯುತ್ತಿದೆ. ಸುಭಿಕ್ಷ ಕೇರಳ ಯೋಜನೆಯ ಅಂಗವಾಗಿ ಪಂಚಾಯಿತಿಯಲ್ಲಿ ವ್ಯಾಪಕ ಕೃಷಿ ಯೋಜನೆ ರೂಪಿಸಲಾಗುತ್ತಿದೆ. ಪಂಚಾಯತ್ ಆಡಳಿತ ಸಮಿತಿ ಮತ್ತು ವಿವಿಧ ಸ್ಥಳೀಯ ಸಂಘಟನೆಗಳು, ಸ್ವಯಂಸೇವಕರ ನೇತೃತ್ವದಲ್ಲಿ ಅನೇಕ ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಲಾಗುತ್ತಿದೆ. ಮಲೆನಾಡ ಪ್ರದೇಶದಲ್ಲಿ ಕೋವಿಡ್ ಕಾಲಘಟ್ಟ ಭತ್ತ ಸಹಿತ ಅಲ್ಪಾವಧಿ ಬೆಳೆಗಳ ಪುನಶ್ಚೇತನದ ಕನಸಿನೊಂದಿಗೆ ಜೀವಪಡೆಯುತ್ತಿರುವುದು ಆಶಾ ಭಾವನೆಗೆ ಕಾರಣವಾಗಿದೆ. ಬಳಾಲ್ ಕೃಷಿ ಅಧಿಕಾರಿ ಅನಿಲ್ ಸೆಬಾಸ್ಟಿಯನ್ ಅವರು ಚಟುವಟಿಕೆಗಳ ನೇತೃತ್ವ ವಹಿಸುತ್ತಿದ್ದಾರೆ.


