ಕಾಸರಗೋಡು: ಸ್ಥಳೀಯ ಜೈವಿಕ ವೈವಿಧ್ಯ ಪರಂಪರಾಗತ ಕೇಂದ್ರ (ಲೋಕಲ್ ಬಯೋ ಡೈವರ್ಸಿಟಿ ಹೆರಿಟೇಜ್ ಸೈಟ್ಸ್) ಗಳ ಅಭಿವೃದ್ಧಿ ಇಂದಿನನಿವಾರ್ಯತೆಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿವೆ ಈ ನಿಟ್ಟಿನಲ್ಲಿ ಅಪಾರ ಸಾಧ್ಯತೆಗಳಿವೆ. ಈ ಬಗ್ಗೆ ಕ್ರಿಯಾತ್ಮಕ ಹೆಜ್ಜೆಯನ್ನು ಸ್ಥಳೀಯಾಡಳಿತೆ ಸಂಸ್ಥೆಗಳು ಇರಿಸಿ ರಂಗಕ್ಕಿಳಿಯಬೇಕಾಗಿವೆ.
ಪರಿಸರಕ್ಕೆ,ಇಲ್ಲಿನ ಜೀವಜಾಲಗಳಿಗೆ, ಸ್ಥಳೀಯ ಜಾನಪದ ಸತ್ವ ಇತ್ಯಾದಿ ಅಂಶಗಳಿಗೆ ಮಹತ್ವ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಪ್ರದೇಶಗಳನ್ನು ಸ್ಥಳೀಯ ಜೈವಿಕ ವೈವಿಧ್ಯ ಪರಂಪರಾಗತ ಕೇಂದ್ರಗಳು ಎಂದು ಘೋಷಿಸಲಾಗುತ್ತದೆ. ಈ ಘೋಷಣೆಯ ಅಧಿಕಾರವನ್ನು ರಾಜ್ಯ ಸರಕಾರ ಸ್ಥಳೀಯಾಡಳಿತೆ ಸಂಸ್ಥೆಗಳಿಗೆ ನೀಡಿದೆ. ಈ ನಿಟ್ಟಿನಲ್ಲಿ ಗಡಿನಾಡು ಕಾಸರಗೋಡು ಜಿಲೆಯಲ್ಲಿ ಬಹುಸಾಧ್ಯತೆ ಕಂಡುಬರುತ್ತಿದೆ.
ಕರಾವಳಿ, ವನಾಂತರ, ಮಲೆನಾಡು ಸಹಿತ ಜಿಲ್ಲೆಯ ಅನೇಕ ಪ್ರದೇಶಗಳು ಈ ಪಟ್ಟವೇರಲು ಅರ್ಹವಾಗಿವೆ. ಇನ್ನೂ ಪತ್ತೆಯಾಗದೇ ಇರುವ (ಹೊರಜಗತ್ತು ಅರಿಯದೇ ಹೋಗಿರುವ) ಅನೇಕ ಇಂಥಾ ಕೇಂದ್ರಗಳು ಪರಿಸರ-ಸಾಮಾಜಿಕ ಮಹತ್ವ ಹೊಂದಿ, ಅಲ್ಲಲ್ಲೇ ಶೋಷಣೆ( ಖಾಸಗಿ ಅತಿಕ್ರಮ ಇತ್ಯಾದಿ)ಗೊಳಗಾಗುತ್ತಿರುವುದೂ ಗಂಭೀರ ಸಮಸ್ಯೆಯೇ ಆಗಿದೆ.
ಇಂತಹ ಸಾಮಾಜಿಕ ದುರಂತಗಳಿಂದ ಈ ಪ್ರಾಕೃತಿಕ ವರದಾನ ಪಡೆದಿರುವ ತಾಣಗಳನ್ನು ಸಂರಕ್ಷಿಸಿ, ಶಾಶ್ವತವಾಗಿ ಯಥಾಸ್ಥಿತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುವರ್ಣಾ ವಕಾಶ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈಗ ಲಭಿಸಿದೆ ಎಂದು ರಾಜ್ಯ ಜೈವಿಕ ವೈವಿಧ್ಯ ಮಂಡಳಿ ಮೆಂಬರ್ ಸೆಕ್ರೆಟರಿಯಾಗಿದ್ದ, ಈಗ ಕಾಸರಗೋಡು ವಿಜಿಲೆನ್ಸ್ ಡಿ.ವೈ.ಎಸ್.ಪಿ. ಆಗಿರುವ ಡಾ.ವಿ.ಬಾಲಕೃಷ್ಣನ್ ಅಭಿಪ್ರಾಯಪಡುತ್ತಾರೆ.
ನೈಂ ಕಯಂ ತಾಣವು ನಾಂದಿ:
ಮುಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನತ್ತೂರು ಬಳಿಯ ಹಸುರಿನ ಬನಸಿರಿ ಪ್ರದೇಶ ನೈಯಂ ಕಯಂ ತಾಣ ಸ್ಥಳೀಯ ಜೈವಿಕ ವೈವಿಧ್ಯ ಪರಂಪರಾಗತ ಕೇಂದ್ರ ಎಂದು ಘೊಷಣೆ ಗೊಂಡಿದೆ. ಈ ಮೂಲಕ ಕಾಸರಗೋಡು ಜಿಲ್ಲೆಯ ಪ್ರಕೃತಿ ಸಂರಕ್ಷಣೆ ಚಟುವಟಿಕೆಗಳಿಗೆ ಹೊಸ ಉತ್ಸಾಹ ಲಭಿಸಿದೆ. ಕಳೆದ ತಿಂಗಳ ಒಂದನೇ ತಾರೀಕಿನಂದು ಈ ಪ್ರದೇಶ ರಾಜ್ಯದ ಹತ್ತನೇ ಲೋಕಲ್ ಬಯೋ ಡೈವರ್ಸಿಟಿ ಹೆರಿಟೇಜ್ ಸೈಟ್ ಆಗಿದೆ.
ಕಿದೂರು ಪಕ್ಷಿ ಧಾಮ:
ಕುಂಬಳೆ ಪಂಚಾಯತ್ ವ್ಯಾಪ್ತಿಯ ಕಿದೂರು ಪಕ್ಷಿ ಧಾಮವೂ ಈ ಸಾಲಿಗೆ ಸೇರಬಲ್ಲ ಬಹುಸಾಧ್ಯತೆಯ ನೈಸರ್ಗಿಕ ತಾವಾಗಿದೆ. ಭತ್ತದ ಗದ್ದೆಗಳು, ಲ್ಯಾಟರೈಟ್ ಕರ್ಗಲ್ಲ ಪ್ರದೇಶಗಳನ್ನೂ ಹೊಂದಿರುವ ವಿಭಿನ್ನ ಭೂಪ್ರದೇಶದಲ್ಲಿ ಸರಿಸುಮಾರು 174 ಜಾತಿಯ ಪಕ್ಷಿಗಳ ವಿಹಾರ ಕೇಂದ್ರವಿದೆ. ವಂಶನಾಶದ ಭೀತಿ ಎದುರಿಸುತ್ತಿರುವ ಬುಲ್ ಬುಲ್, ಕಡಲಕಾಗೆ ಸಹಿತ 38 ವಿಧಧ ಅಲೆಮಾರಿ ಹಕ್ಕಿಗಳು, ಪಶ್ಚಿಮ ಘಟ್ಟದ ಬಾನಾಡಿಗಳು, ವೈವಿಧ್ಯಮಯಪಾರಿವಾಳಗಳು ಇಲ್ಲಿ ಕಂಡುಬರುತ್ತಿವೆ.
ಈ ತಾಣಕ್ಕೆ ನ್ಯಾಷನಲ್ ಬಯೋ ಡೈವರ್ಸಿಟಿ ಪ್ರಾಧಿಕಾರದ ಪರಿಶೀಲನೆ ಲಭ್ಯತೆಯ ಸಾಧ್ಯತೆಯಿದೆ ಎಂದು ಡಾ.ಬಾಲಕೃಷ್ಣನ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಪಕ್ಷಿಧಾಮದ ಅಭಿವೃಧ್ಧಿಗೆ ಗರಿಷ್ಠ ಮಟ್ಟದ ಯತ್ನ ನಡೆಸಲಾಗುತ್ತಿದೆ ಎಂದು ಕುಂಬಳೆ ಗ್ರಾಮಪಂಚಾಯತ್ ಅಧ್ಯಕ್ಷಪುಂಡರೀಕಾಕ್ಷ ತಿಳಿಸಿದರು.
ಪರಪ್ಪ:
ಕೃಷಿವಲಯದಲ್ಲೂ ಕಾಸರಗೋಡು ಜಿಲ್ಲೆಗೆ ಸ್ವಂತಿಕೆಯಿದೆ ಎಂದು ಸಾಬೀತುಪಡಿಸುವ ಜಾಗಗಳು ಇವೆ. "ಸ್ವರ್ಣಮಲ್ಲಿ" ಎಂಬ ಹೆಸರಿನ ವಿಶೇಷ ರೀತಿಯ ಭತ್ತವನ್ನು ಬೆಳೆಯಲು ಅರ್ಹವಾದ ಭೂಮಿ ಪರಪ್ಪದಲ್ಲಿದೆ. 1999ರಲ್ಲಿ ನಡೆಸಲಾದ ಸಮೀಕ್ಷೆ (ಸರ್ವೇ)ಯಲ್ಲಿ ಇದು ಪತ್ತೆಯಾಗಿದೆ ಎಂದು ಡಾ. ಬಾಲಕೃಷ್ಣನ್ ತಿಳಿಸಿದರು.
ಕೆಲವು ವರ್ಷಗಳ ಹಿಂದಿನ ವರೆಗೆ "ಜಾತಿ ಸುಖಿ" ಎಂಬ ಹೆಸರಿನ ವಿಶೇಷ ಅಕ್ಕಿ ಕಾಸರಗೋಡಿನ ಸ್ವಂತ ಉತ್ಪನ್ನ ವಾಗಿ ಬಹುಬೇಡಿಕೆ ಹೊಂದಿತ್ತು. ಆದರೆ ಕಾರಣಾಂತರಗಳಿಂದ ಸ್ವಂತ ಬೆಳೆಯಾಗಿದ್ದ ಅಕ್ಕಿ, ಕರಿಮೆಣಸು ಇತ್ಯಾದಿಗಳು ಕ್ರಮೇಣ ಕಣ್ಮರೆಯಾದುವು ಎಂದವರು ಕಳಕಳಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕಾಲಮಿಂಚಿಲ್ಲ ಎಂಬ ನಿರೀಕ್ಷೆ ವ್ಯಕ್ತಪಡಿಸಿರುವ ಅವರು ಇವನ್ನು ಅಗ್ರೋ ಬಯೋ ಡೈವರ್ಸಿಟಿ ಹೆರಿಟೇಜ್ ಯೋಜನೆಯಲ್ಲಿ ಅಳವಡಿಸಿದರೆ ಸಂರಕ್ಷಣೆ ಮತ್ತು ಪುನಶ್ಚೇತನ ಸಾಧ್ಯ ಎಂದವರು ಭರವಸೆಯಿಂದ ನುಡಿಯುತ್ತಾರೆ.
ಇನ್ನೂ ಇವೆ ಅನೇಕ ತಾಣಗಳು:
ಜಗತ್ತು ಇನ್ನೂ ಅರಿಯದೇ ಇರುವ, ಎಲೆಮರೆಯ ಕಾಯಿಯಂಥಾ ಈ ಸಾಲಿಗೆ ಸೇರಬಲ್ಲ ಅನೇಕ ಅರ್ಹ ತಾಣಗಳು ಕಾಸರಗೋಡು ಜಿಲ್ಲೆಯಲ್ಲಿವೆ. ಇವುಗಳನ್ನು ಪತ್ತೆಮಾಡಿ, ಸಂರಕ್ಷಿಸುವ ಬಲುದೊಡ್ಡ ಜವಾಬ್ದಾರಿಕೆ ಸಮಾಜದ ಮೇಲಿದೆ.
ಸಂರಕ್ಷಣೆ ಲಭಿಸದಿದ್ದಲ್ಲಿ ದುರಂತ ಭೀತಿ:
ಕಾಸರಗೋಡು ಜಿಲ್ಲೆಯಲ್ಲಿ ಕಂಡುಬರುತ್ತಿರುವ ಕುದುರುಕಾಡು, ಜೀವನದಿಗಳು, ಅವುಗಳ ನೈಸರ್ಗಿಕ ತಟಿಗಳು, ಜಲಾಶಯಗಳು, ಪುಟ್ಟ ಜಲಪಾತಗಳು, ಕಗ್ಗಲ್ಲ ಪ್ರದೇಶಗಳು, ಹಳ್ಳಗಳು, ಬನಗಳು ಇತ್ಯಾದಿಗಳು ಸಸ್ಯ-ಜೈವಿಕ ಮಹತ್ವ ಹೊಂದಿರುವವುಗಳು. ಇವುಗಳನ್ನು ಆಶ್ರಯಿಸಿ ಅನೇಕ ಜೀವರಾಶಿಗಳು ಬದುಕುತ್ತಿವೆ. ಇಂಥಾ ಕೇಂದ್ರಗಳ ಮೇಲೆ ಅತಿಕ್ರಮಗಳು ಇಡೀ ಜೀವರಾಶಿಗಳ ಮೇಲೆ ಅಡ್ಡಪರಿಣಾಮ ಬೀರುತ್ತಿವೆ. ಇದು ಪ್ರಾಕೃತಿಕ ದುರಂತಗಳಿಗೆ ಕದ ತೆರೆಯುವ ಭೀತಿಯಿದೆ ಎಂದು ಡಾ.ವಿ.ಬಾಲಕೃಷ್ಣನ್ ನುಡಿಯುತ್ತಾರೆ.
ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಜೈವಿಕ ವೈವಿಧ್ಯ ಪೋಷಣೆ ಸಮಿತಿ(ಬಿ.ಎಂ.ಸಿ.) ನೇತೃತ್ವದಲ್ಲಿ ಇವುಗಳ ಪತ್ತೆ ಮತ್ತು ಸಂರಕ್ಷಣೆ ನಡೆಯಬೇಕು. ಈ ಮೂಲಕ ಪ್ರಕೃತಿ ಸೌಂದರ್ಯದ ರಕ್ಷಣೆ, ಪ್ರಾಕೃತಿ ದುರಂತಗಳಿಗೆ ಶಾಶ್ವತ ತಡೆ ನಮ್ಮ ನಾಡಿನ ಧ್ಯೇಯವಾಗಬೇಕು.





