ಉಪ್ಪಳ: ಜಿಲ್ಲೆಯ ವಿವಿಧೆಡೆಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಹಲವು ಮನೆಗಳು ಅಪಾಯದಂಚಿನಲ್ಲಿದೆ. ಹಲವಾರು ತೆಂಗು ಸಹಿತ ಹಲವು ಮರಗಳು ಸಮುದ್ರ ಪಾಲಾಗಿದೆ. ಅಪಾಯದಂಚಿನಲ್ಲಿರುವ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನಿರ್ದೇಶ ನೀಡಲಾಗಿದೆ.
ಉಪ್ಪಳ ಮೂಸೋಡಿಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು ಹಲವಾರು ತೆಂಗಿನ ಮರಗಳು ಹಾಗು ಇತರ ಮರಗಳು ಸಮುದ್ರ ಪಾಲಾಗಿವೆ. ಮೂಸೋಡಿಯ ಅಬ್ದುಲ್ಲ ಅವರ ಮನೆಯ ಅಂಗಳದ ವರೆಗೆ ಸಮುದ್ರ ತೆರೆಗಳು ತಲುಪಿದೆ. ಈ ಮನೆ ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಯಿದೆ. ಹತ್ತಿರದ ಜನ ವಾಸವಿಲ್ಲದ ಇನ್ನೆರಡು ಮನೆಗಳೂ ಅಪಾಯದಂಚಿನಲ್ಲಿವೆ.
ಕಡಲ್ಕೊರೆತ ಭೀತಿಯ ಹಿನ್ನೆಲೆಯಲ್ಲಿ ಅಪಾಯದಂಚಿನಲ್ಲಿರುವ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕುಂಬಳೆ ಕರಾವಳಿ ಪೆÇಲೀಸ್ ಅಧಿಕಾರಿಗಳು ನಿರ್ದೇಶ ನೀಡಿದ್ದಾರೆ. ತಡೆಗೋಡೆ ಇಲ್ಲದಿರುವುದರಿಂದ ಈ ಪ್ರದೇಶದಲ್ಲಿ ತೀವ್ರ ಕಡಲ್ಕೊರೆತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಕಡಲ್ಕೊರೆತ ಸಾಮಾನ್ಯವಾಗಿದ್ದರೂ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ವಲಿಯಪರಂಬ, ತೈಕಡಪ್ಪುರ, ಪಳ್ಳಿಕೆರೆ, ಅಜಾನೂರು ಕಡಪ್ಪುರ, ತೃಕ್ಕನ್ನಾಡು, ಉದುಮ ಕೋಡಿ ಕಡಪ್ಪುರ, ಚೆಂಬರಿಕ, ಚೇರಂಗೈ ಕಡಪ್ಪುರ ಮೊದಲಾದ ಸ್ಥಳಗಳಲ್ಲಿ ಕಡಲ್ಕೊರೆತ ಭೀತಿ ಆವರಿಸಿದೆ.


