ಕಾಸರಗೋಡು: ಜಿಲ್ಲೆಯಲ್ಲಿ ಸಂಪರ್ಕದ ಮೂಲಕ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡು ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣದ ಸರ್ಕಲ್‍ನಿಂದ ಹಳೇ ಬಸ್ ನಿಲ್ದಾಣದ ಟ್ರಾಫಿಕ್ ಸರ್ಕಲ್ ವರೆಗೆ ಕಂಟೈನ್‍ಮೆಂಟ್ ಪ್ರದೇಶವೆಂದು ಘೋಷಿಸಲಾಗಿದ್ದು, ಈ ಪ್ರದೇಶದಲ್ಲಿ ಯಾವುದೇ ವ್ಯಾಪಾರಿ ಸಂಸ್ಥೆ ತೆರೆದು ಕಾರ್ಯಾಚರಿಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಆದೇಶಿಸಿದ್ದಾರೆ.
ಶುಕ್ರವಾರ ರಾತ್ರಿಯಿಂದ ಈ ಆದೇಶ ಜಾರಿಗೆ ಬಂದಿದ್ದು, ಶನಿವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಆಗಮಿಸಿದ ವ್ಯಾಪಾರಿಗಳಿಗೆ ಮಾಹಿತಿ ಲಭಿಸಿತ್ತು. ಜುಲೈ 17ವರೆಗೆ ಬೀದಿಬದಿ ವ್ಯಾಪಾರವನ್ನೂ ನಿಷೇಧಿಸಲಾಗಿದೆ. ಕಾಸರಗೋಡು ನಗರಸಭೆಯ 19ನೇ ವಾರ್ಡು ಕೊರಕ್ಕೋಡು ಹಾಗೂ 20ನೇ ವಾರ್ಡುಗಳಲ್ಲಿನ ಕೆಲವು ಪ್ರದೇಶಗಳನ್ನು ಆಂಶಿಕವಾಗಿ ಕಂಟೈನ್‍ಮೆಂಟ್ ಪ್ರದೇಶವೆಂದು ಘೋಷಿಸಲಾಗಿದೆ. ನಗರದಲ್ಲಿ ಪೊಲೀಸ್ ಕಾವಲು ಬಿಗುಗೊಳಿಸಲಾಗಿದೆ. ತರಕಾರಿ ವ್ಯಾಪಾರಿಗಳಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಗರದ ಕಾರ್ ಶೋರೂಂ ಒಂದರ ಸಿಬ್ಬಂದಿಯಲ್ಲೂ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೋರೂಂ ಸೀಲ್‍ಡೌನ್ ಮಾಡಲಾಗಿದೆ.

