ಬದಿಯಡ್ಕ: ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಪರಿಸರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮನುಕುಲ ವಸತಿ ಸಂಕೀರ್ಣದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
ಸಮಾರಂಭದಲ್ಲಿ ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ದೀಪ ಪ್ರಜ್ವಲನಗೈದು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಬದಿಯಡ್ಕದಂತಹ ಅಭಿವೃದ್ದಿಯ ಪಥದಲ್ಲಿ ನಾಗಾಲೋಟದಲ್ಲಿರುವ ಪ್ರದೇಶದ ತುರ್ತು ಅಗತ್ಯಗಳಲ್ಲಿ ಒಂದಾಗಿರುವ ಸಕಲ ಸಜ್ಜೀಕರಣವನ್ನೊಳಗೊಂಡ ಇಂತಹ ವಸತಿ ಸೌಕರ್ಯಗಳು ಆಶಾದಾಯಕವಾಗಿದೆ. ಜನರ ಅನುಕೂಲತೆಗಳಿಗಾಗಿ ಇನ್ನಷ್ಟು ಸಮೃದ್ದಿ ಈ ವಸತಿ ಸಂಕೀರ್ಣದ ಮೂಲಕ ಲಭ್ಯವಾಗಲಿ ಎಂದು ಹಾರೈಸಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತ, ಪ್ರಗತಿಪರ ಕೃಷಿಕ ಶ್ರೀಕೃಷ್ಣ ಭಟ್ ಪುದುಕೋಳಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಅಭಿಮಾನಕ್ಕೆ ಪ್ರತೀತಿಯಾಗಿ ವಸತಿ ಸಮುಚ್ಚದ ಒಡೆಯರಾದ ಕೃಷ್ಣಮೂರ್ತಿ ಪುದುಕೋಳಿ ಅವರ ಮಹತ್ವಾಕಾಂಕ್ಷೆಯ ಪ್ರತಿಮೆಯಾಗಿ ಮೂಡಿಬಂದಿರುವ, ನಾಡಿಗೇ ಹೊಸ ಪರಿಕಲ್ಪನೆಯಾದ ವಸತಿ ಸಂಕೀರ್ಣ ಯಶಸ್ವಿಯಾಗಲಿ ಎಂದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ, ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ಆಡಳಿತ ಸಮಿತಿಯ ಅಧ್ಯಕ್ಷ ಜಯಪ್ರಕಾಶ ಪಜಿಲ, ಹವ್ಯಕ ಮಹಾಮಂಡಲದ ನೇತಾರೆ ಈಶ್ವರಿ ಬೇರ್ಕಡವು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ, ಹಿರಿಯ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ನೀರ್ಚಾಲು ಸೇವಾ ಸಹಕಾರಿ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಸುಬ್ರಹ್ಮಣ್ಯ ಭಟ್ ಪಿ. ಮೊದಲಾದವರು ಶುಭಹಾರೈಸಿದರು.
ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಪ್ರಕೃತಿಯ ಮಡಿಲಲ್ಲಿ ಕೃಷ್ಣಮೂರ್ತಿ ಪುದುಕೋಳಿ ಅವರು 10 ವಸತಿಗಳ ಸೌಕರ್ಯವಿರುವ ಮನುಕುಲ ಅಪಾರ್ಟ್ ಮೆಂಟ್ ನಿರ್ಮಿಸಿ ನಾಡಿಗೆ ಮಾದರಿಯಾಗಿದ್ದಾರೆ. ಆಧುನಿಕ ಸೌಕರ್ಯಗಳಿರುವ ಈ ವಸತಿ ಸಂಕೀರ್ಣದಲ್ಲಿ ಖಾರ್ಯ ಉಳಕೊಳ್ಳುವುದರ ಜೊತೆಗೆ ದಿನ, ವಾರಗಳ ಕಾಲವೂ ತಾತ್ಕಾಲಿಕವಾಗಿ ಉಳಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳ ಪ್ಲೇ ಗ್ರೌಂಡ್, ಸೋಲಾರ್ ವಿದ್ಯುತ್, ಪ್ರತ್ಯೇಕ ಕಾಂಪೋಸ್ಟ್ ನಿರ್ವಹಣೆ, ಎ.ಸಿ./ನಾನ್ ಎಸಿ, ಸುವ್ಯವಸ್ಥಿತ ಬಿಸಿನೀರಿನ ಲಭ್ಯತೆ ಇರುವ ಬಚ್ಚಲು, ಟಿ.ವಿ ಮೊದಲಾದ ಹತ್ತು ಹಲವು ವ್ಯವಸ್ಥೆಗಳೊಂದಿಗೆ ವಸತಿ ಸಂಕೀರ್ಣ ಗಮನ ಸೆಳೆಯುತ್ತದೆ.



