ಕೊಚ್ಚಿ: ಸಾಮಾಜಿಕ ಜಾಲತಾಣದಲ್ಲಿ ಹಲವಾರು ವರ್ಷಗಳಿಂದ ಜನಜಾಗೃತಿಗಾಗಿ ಕೇರಳ ಪೋಲೀಸ್ ಇಲಾಖೆ ನಡೆಸುವ ಹಾಸ್ಯಮಿಶ್ರಿತ ಸಂಭಾಷಣೆ ಕಲಾವಿದ ಕುಟ್ಟನ್ ಪಿಳ್ಳೆ ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿದ್ದಾರೆ. ಪೋಲೀಸ್ ಇಲಾಖೆಯ ಇಂತಹ ಜಾಗೃತಿ ಪ್ರಹಸನದ ಎರಡನೇ ಭಾಘ ಶೀಘ್ರ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳ್ಳಲಿದ್ದು ಪಿ.ಸಿ.ಕುಟ್ಟನ್ ಪಿಳ್ಳೆ ಸ್ಪೀಕಿಂಗ್ ಎಂಬ ವೀಡಿಯೋದ ಎರಡನೇ ಭಾಗ ಬಿಡುಗಡೆಗೊಳ್ಳುವ ಹಂತದಲ್ಲಿದೆ.
ನೆನಪಿದೆಯೇ ಈ ಮುಖ(ಓರ್ಮೆಯುಂಡೋ ಈ ಮುಖಂ) ಶಿರೋನಾಮೆಯಲ್ಲಿ ಎರಡನೇ ಭಾಗ ಗುರುವಾರ ಸಂಜೆ ಯೂಟ್ಯೂಬ್ ಚಾನೆಲ್ ಮೂಲಕ ಪ್ರದರ್ಶನಗೊಳ್ಳಲಿದೆ ಎಂದು ಪ್ರೊಮೋ ವೀಡಿಯೋದಲ್ಲಿ ತಿಳಿಸಲಾಗಿತ್ತು.ಆದರೆ ತಾಂತ್ರಿಕ ಅಡಚಣೆಯಿಂದ ಅದು ಸಾಧ್ಯವಾಗಿರಲಿಲ್ಲ. ಬಳಿಕ ಶುಕ್ರವಾರ ಮೊದಲ ವೀಡಿಯೋ ತುಣುಕು ಪ್ರದರ್ಶಿಸಲಾಗಿದ್ದು ಆರು ನಿಮಿಷ 22 ಸೆಕೆಂಡ್ ಗಳ ವೀಡಿಯೋ ಗಮನ ಸೆಳೆಯಿತು.
ರಸ್ತೆ ಸುರಕ್ಷತೆಗೆ ಸಂಬಂಧಿಸಿ ಜಾಗೃತಿ ಮೂಡಿಸುವುದು ಈಗಿನ ಎರಡನೇ ಹಂತದ ಇಂತಹ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಮೊದಲ ವೀಡಿಯೋ ಪ್ರದರ್ಶನಕ್ಕೆ ಜನಸಾಮಾನ್ಯರು ಭಾರೀ ಕುತೂಹಲದಿಂದ ಸ್ವಾಗತಿಸಿದ್ದಾರೆ.
ಜೂನ್ 6 ರಂದು ಕೇರಳ ಪೋಲೀಸ್ ಇಲಾಖೆಯಿಂದ ಇಂತಹ ನೂತನ ಅವಿಷ್ಕಾರದ ಮೊದಲ ಭಾಗದ ಪ್ರದರ್ಶನ ಪ್ರಸಾರ ಆರಂಭಿಸಲಾಗಿತ್ತು. ಆರಂಭ ಹಂತದ ಹಲವು ನ್ಯೂನತೆಗಳನ್ನು ಬದಲಾಯಿಸಿ ಇದೀಗ ಎರಡನೇ ಹಂತವನ್ನು ಆರಂಭಿಸಲಾಗಿದೆ ಎಂದು ಉನ್ನತ ಪೋಲೀಸ್ ವಲಯ ತಿಳಿಸಿವೆ. ಪೋಲೀಸ್ ಇಲಾಖೆಯ ಸಮೂಹ ಮಾಧ್ಯಮ ವಿಭಾಗ ಇಂತಹ ವಿನೂತನ ಕಾರ್ಯಕ್ರಮ ರೂಪಿಸಿದ್ದು, ಆರಂಭದ ಭಾಗದಲ್ಲಿ ಪ್ರದರ್ಶಿಸಲಾದ ವೀಡಿಯೋ ತುಣುಕುಗಳು ಕೇರಳದಾತ್ಯಂತ ಜನಸಾಮಾನ್ಯರಿಗೆ ಸಂಚಲನ ಸೃಷ್ಟಿಸಿತ್ತು. ಜೊತೆಗೆ ಕೆಲವು ರಾಜಕೀಯ,ಧಾರ್ಮಿಕ ಚರ್ಚೆಗಳಿಗೆ ಕಾರಣವಾದ ಹಿನ್ನೆಲೆಯಲ್ಲಿ ವಿವಾದಗೊಳ್ಳುತ್ತಿರುವಂತೆ ನಿಲ್ಲಿಸಲಾಗಿತ್ತು. ಕುಟ್ಟನ್ ಪಿಳ್ಳೆ ಎಂಬ ಕಥಾಪಾತ್ರದ ಮೂಲಕ ಜಾಗೃತಿಯು ಹಾಸ್ಯಮಿಶ್ರಿತ ಸಂಭಾಷಣೆ, ಟೀಕೆ, ಅಸಮಧಾನ, ಸಂತೋಷಗಳ ಸಮ್ಮಿಶ್ರಣವಾಗಿ ಗಮನೀಯವೆನಿಸಿದೆ.





