ಮುಳ್ಳೇರಿಯ: ಚೆರ್ಕಳ-ಜಾಲ್ಸೂರು ಅಂತರ್ ರಾಜ್ಯ ಹೆದ್ದಾರಿಯ ಪರಪ್ಪೆಯಲ್ಲಿ ರಸ್ತೆ ಅಡ್ಡ ಎರಡು ದಿನಗಳ ಹಿಂದೆ ಕಾಸರಗೋಡು ಜಿಲ್ಲಾಡಳಿತ ಹಾಕಿದ್ದ ಮಣ್ಣನ್ನು ಗುರುವಾರ ಸಂಜೆ ತೆರವು ಮಾಡಲಾಗಿದೆ.
ಗಡಿ ಗ್ರಾಮ ದೇಲಂಪಾಡಿಯ ಕೆಲವು ಪ್ರದೇಶದ ನಾಗರಿಕರಿಗೆ ತಮ್ಮ ದೈನಂದಿನ ಅಗತ್ಯಗಳಿಗೆ ಪರಪ್ಪೆಗೆ ತೆರಳಲು ತೊಡಕಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ತೆರವು ನಡೆಸಲಾಗಿದೆ.
ಪರಪ್ಪೆ, ಕಿನ್ನಿಂಗಾರ್, ಸ್ವರ್ಗ, ಬೆರಿಪದವು, ಪಾದೆಕಲ್ಲು, ಆನೆಕಲ್ಲು ಮೊದಲಾದ ಅಂತರ್ ರಾಜ್ಯ ಗ್ರಾಮೀಣ ಗಡಿಗಳಲ್ಲಿ ಕಾಸರಗೋಡು ಜಿಲ್ಲಾಡಳಿತ ಮಣ್ಣು ಹಾಕಿ ಸಂಚಾರ ನಿಷೇಧಿಸಿತ್ತು. ಕರ್ನಾಟಕದಾತ್ಯಂತ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಜೊತೆಗೆ ಇಂದಿನಿಂದ(ಜು.4) ರಿಂದ ಕಾಸರಗೋಡಿನಿಂದ ಕರ್ನಾಟಕದ ಎಲ್ಲಾ ಗಡಿಗಳನ್ನೂ ಮುಚ್ಚಲಾಗುತ್ತದೆ ಎಂಬ ವದಂತಿಯ ಬಗ್ಗೆ ಸ್ಪಷ್ಟೀಕರಣ ನೀಡಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು, ಹರಡಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಹೊಸ ತೀರ್ಮಾನಗಳನ್ನು ಜಿಲ್ಲಾಡಳಿತ ಕೈಗೊಂಡಿಲ್ಲ. ಲಾಕ್ ಡೌನ್ ಆರಂಭದಲ್ಲಿ ಮುಚ್ಚಲಾಗಿದ್ದ ರಸ್ತೆಗಳನ್ನು ಮಾತ್ರ ಈಗ ಮುಚ್ಚಲಾಗುತ್ತಿದೆ. ಆದರೂ ಅನಗತ್ಯ ಸಂಚಾರ ಬೇಡ ಎಂದು ಜಿಲ್ಲಾಧಿಕಾರಿಗಳು ತಿಳಿಸಿರುವರು.





