ತಿರುವನಂತಪುರ: ಮಂಗಳವಾರ ರಾಜ್ಯದಲ್ಲಿ ಅತಿ ಹೆಚ್ಚು ದೈನಂದಿನ ಕೋವಿಡ್ ಬಾಧಿತರ ವರದಿಯಾಗಿದ್ದು 1,758 ಜನರಿಗೆ ಕೋವಿಡ್ ರೋಗನಿರ್ಣಯ ಮಾಡಲಾಗಿದೆ. ಜೊತೆಗೆ ಸಂಪರ್ಕದಿಂದ ಕೋವಿಡ್ ಬಾಧಿಸುತ್ತಿರುವ ಪ್ರಕರಣಗಳೂ ಏರುಗತಿಯಲ್ಲಿರುವುದರಿಂದ ಆತಂಕ ಹೆಚ್ಚುತ್ತಿದೆ. ಹೊಸ ಅಂಕಿ ಅಂಶಗಳೊಂದಿಗೆ ಚಿಕಿತ್ಸೆ ಪಡೆಯುವ ಜನರ ಸಂಖ್ಯೆಯಲ್ಲಿ ಹೆಚ್ಚಳವೂ ವರದಿಯಾಗಿದೆ. ವಿವರವಾದ ಮಾಹಿತಿ ಇಂತಿದೆ.
ರಾಜ್ಯದಲ್ಲಿ ಮಂಗಳವಾರ ಆರು ಕೋವಿಡ್ ಮೃತ್ಯು:
ಕೋವಿಡ್ -19 ಸೋಂಕಿನಿಂದ ಆರು ಮಂದಿ ಮಂಗಳವಾರ ಮೃತರಾಗಿದ್ದಾರೆ. ಆ.8 ರಂದು ನಿಧನರಾದ ಪಾಲಕ್ಕಾಡ್ ನ ವಿಲಾಯೂರ್ ಮೂಲದ ಪಾತುಮ್ಮ (76), ಆ. 2 ರಂದು ನಿಧನರಾದ ತಿರುವನಂತಪುರದ ಕೊಲ್ಲಪುರಂನ ವಿಜಯ (32), ಕೋಝಿಕ್ಕೋಡ್ ಚೆಳವೂರ್ ನ ಕೌಸು(65), ಕೋಝಿಕ್ಕೋಡ್ ಬೇಪೂರ್ ನಿವಾಸಿ ರಾಜಲಕ್ಷ್ಮೀ(61), ತಿರುವನಂತಪುರದ ವಿಜಯ್(32), ಶ್ರೀಕಾರ್ಯ ನಿವಾಸಿ ಸತ್ಯನ್ (54) ಎಂಬವರು ವಿವಿಧ ದಿನಗಳಲ್ಲಾಗಿ ಮೃತರಾಗಿದ್ದು ಬಳಿಕದ ಪರೀಕ್ಷೆಯಲ್ಲಿ ಕೋವಿಡ್ ನಿಂದಾಗಿ ಸಾವನ್ನಪ್ಪಿರುವುದಾಗಿ ದೃಢಪಡಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಮೃತರಾದವರ ಸಂಖ್ಯೆ 175 ಕ್ಕೆ ಏರಿದೆ.
29,000 ಮಾದರಿಗಳ ಪರೀಕ್ಷೆ:
ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 29,265 ಮಾದರಿಗಳನ್ನು ಪರೀಕ್ಷಿಸಲಾಗಿದೆ. ವಾಡಿಕೆಯ ಮಾದರಿಗಳು, ವಿಮಾನ ನಿಲ್ದಾಣ ಕ್ವಾರಂಟೈನ್ , ಪೂಲ್ಡ್ ಸೆಂಟಿನೆಲ್, ಸಿಬಿಎಸ್ ಟಿ, ಟ್ರುನಾಟ್, ಸಿಎಫ್ ಎ ಮತ್ತು ಆಂಟಿಜೆನ್ ಅಸ್ಸೇ ಸೇರಿದಂತೆ ಒಟ್ಟು 12,40,076 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಸೆಂಟಿನೆಲ್ ಕ್ವಾರಂಟೈನ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅನ್ಯರಾಜ್ಯ ಕಾರ್ಮಿಕರು ಮತ್ತು ಹೆಚ್ಚಿನ ಸಾಮಾಜಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳಂತಹ ಆದ್ಯತೆಯ ಗುಂಪುಗಳಿಂದ 1,51,714 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಿನ್ನೆ 13 ಹೊಸ ಹಾಟ್ ಸ್ಪಾಟ್ ಗಳನ್ನೂ ಗುರುತಿಸಲಾಗಿದೆ. 18 ಪ್ರದೇಶಗಳನ್ನು ಹೊರಗಿಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇದೀಗ 565 ಹಾಟ್ ಸ್ಪಾಟ್‍ಗಳಿವೆ.
ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆಯಲ್ಲಿರುವವರು:
ತಿರುವನಂತಪುರವು ರಾಜ್ಯದಲ್ಲಿ ಅತಿ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿರುವ ಜಿಲ್ಲೆಯಾಗಿದೆ. ರಾಜಧಾನಿಯಲ್ಲಿ ಸುಮಾರು 4,306 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಲಪ್ಪುರಂ ಜಿಲ್ಲೆಯಲ್ಲಿ 2,350 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರ್ನಾಕುಳಂ ಜಿಲ್ಲೆಯಲ್ಲಿ 1,572 ರೋಗಿಗಳಿದ್ದಾರೆ. ಕೋಝಿಕ್ಕೋಡ್ ನಲ್ಲಿ 1,437 ಮತ್ತು ಆಲಪ್ಪುಳದಲ್ಲಿ 1,410 ರೋಗಿಗಳಿದ್ದಾರೆ. ಕೊಲ್ಲಂ 657, ಪತ್ತನಂತಿಟ್ಟು 344, ಕೊಟ್ಟಾಯಂ 704, ಇಡುಕ್ಕಿ 229, ತ್ರಿಶೂರ್ 618, ಪಾಲಕ್ಕಾಡ್ 889, ವಯನಾಡ್ 307, ಕಣ್ಣೂರು 650 ಮತ್ತು ಕಾಸರಗೋಡು 801 ಮಂದಿ ಚಿಕಿತ್ಸೆಯಲ್ಲಿದ್ದಾರೆ.
ಕ್ವಾರಂಟೈನ್ ಮಾಹಿತಿ:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,65,564 ಜನರು ಕ್ವಾರಂಟೈನ್ ನಲ್ಲಿದ್ದಾರೆ. ಈ ಪೈಕಿ 1,51,931 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 13,633 ಆಸ್ಪತ್ರೆಯ ಕ್ವಾರಂಟೈನ್ ನಲ್ಲಿದ್ದಾರೆ. ಒಟ್ಟು 1,583 ಜನರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ 1,641 ಜನರಿಗೆ ಸಂಪರ್ಕದ ಮೂಲಕ ರೋಗ ಪತ್ತೆಯಾಗಿದೆ. ಈ ಪೈಕಿ 81 ಮಂದಿ ಸೋಂಕು ಬಾಧಿತರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.


