ಎರ್ನಾಕುಳಂ: ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಮತ್ತು ಚಿನ್ನದ ಕಳ್ಳಸಾಗಣೆ ಆರೋಪಿ ಸ್ವಪ್ನಾ ಸುರೇಶ್ ಜೊತೆಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ. 2017 ರಲ್ಲಿ ಅವರು ಜೊತೆಯಾಗಿ ಯುಎಇಗೆ ಭೇಟಿ ನೀಡಿದ್ದರು. ಶಿವಶಂಕರ್ 2018 ರಲ್ಲಿ ಒಮಾನ್‍ಗೆ ಆಗಮಿಸಿ ಅಲ್ಲಿಯೂ ಸ್ವಪ್ನಾ ಸುರೇಶ್ ಜೊತೆಗಿದ್ದರು. ಅದೇ ವರ್ಷದ ಅಕ್ಟೋಬರ್‍ನಲ್ಲಿ ಅವರು ಪ್ರವಾಹ ಪರಿಹಾರಕ್ಕಾಗಿ ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಯೊಂದಿಗೆ ಸ್ವಪ್ನಾ ಸುರೇಶ್ ಇದ್ದರೆಂದು ರಿಮಾಂಡ್ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಲೈಫ್ ಮಿಷನ್ ಆಯೋಗದಿಂದ ಕಮಿಷನ್:
ಲೈಫ್ ಮಿಷನ್ ಯೋಜನೆಯಿಂದ ಪಡೆದ ಕಮಿಷನ್ ಮೊತ್ತವನ್ನು ಯುಎಇ ಕಾನ್ಸುಲೇಟ್ ನಲ್ಲಿ ಇಬ್ಬರಿಗೆ ಸ್ವಪ್ನಾ ಸುರೇಶ್ ಹಂಚಿಕೊಂಡಿದ್ದರು. ಒಟ್ಟು ಬರೋಬ್ಬರಿ 18 ಕೋಟಿ ರೂ.ಗಳ ಲೈಫ್ ಮಿಷನ್ ಯೋಜನೆಯಲ್ಲಿ ಸಪ್ನಾ ಮತ್ತು ಯುಎಇ ಕಾನ್ಸುಲೇಟ್‍ನ ಅಧಿಕಾರಿ ಮತ್ತು ಅಕೌಂಟೆಂಟ್ ಗೆ ಒಟ್ಟು ಸುಮಾರು 3.6 ಕೋಟಿ ರೂ. ಅಥವಾ ಒಟ್ಟು ಯೋಜನಾ ಮೊತ್ತದ ಶೇ.20 ಕಮಿಷನ್ ರೂಪದಲ್ಲಿ ಲಭ್ಯವಾಗಿದ್ದು ಆರೋಪಿಗಳಿಂದ ಮಾಹಿತಿಯನ್ನು ಸಂಗ್ರಹಿಸಲು ಇಡಿ ತಯಾರಿ ನಡೆಸುತ್ತಿದೆ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿವಶಂಕರ್ ಅವರು ಸ್ವಪ್ನಾ ಸುರೇಶ್ ಅವರ ಚಟುವಟಿಕೆಗಳ ಬಗ್ಗೆ ಸಮಗ್ರವಾಗಿ ಮಾಹಿತಿಯುಳ್ಳವರಾಗಿದ್ದರು. ಮತ್ತು ಸಿಎಂ ಕಚೇರಿಯಲ್ಲಿ ಸ್ವಪ್ನಾ ಸುರೇಶ್ ಅವರ ಪ್ರಭಾವ ಬೆಳೆಸಲು ಮಧ್ಯವರ್ತಿಯಾಗಿದ್ದರು ಎಂದು ಇಡಿ ಹೇಳಿದೆ. ಸಪ್ನಾ ಅವರೊಂದಿಗೆ ಬ್ಯಾಂಕ್ ಲಾಕರ್ ಹಂಚಿಕೊಂಡ ಚಾರ್ಟರ್ಡ್ ಅಕೌಂಟೆಂಟ್ ವೇಣುಗೋಪಾಲ್ ಅವರನ್ನು ತನಿಖಾ ತಂಡ ಪ್ರಶ್ನಿಸಿದೆ. ಶಿವಶಂಕರ್ ಅವರು ವೇಣುಗೋಪಾಲ್ ಅವರನ್ನು ಸ್ವಪ್ನಾಗೆ ಪರಿಚಯಿಸಿದ್ದರು ಎಂದು ತನಿಖಾ ತಂಡ ಇದೀಗ ಕಂಡುಹಿಡಿದಿದೆ.


