ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಕೃಷಿಭವನದ ನೇತೃತ್ವದಲ್ಲಿ ಓಣಂ ತರಕಾರಿ ಸಂತೆಯನ್ನು ಆರಂಭಿಸಲಾಯಿತು. ಪೊಲೀಸ್ ಠಾಣೆಯ ಸಮೀಪದಲ್ಲಿರುವ ಇಕೋ ಶಾಪ್‍ನಲ್ಲಿ ಆರಂಭಗೊಂಡ ಸಂತೆಯನ್ನು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿ ಮಾತನಾಡಿ ಮನುಕುಲಕ್ಕೆ ವಿಷಕಾರಿಯಾದ ಕೋವಿಡ್‍ನಂತಹ ಮಹಾ ರೋಗಗಳು ಬಾರದಂತೆ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದ್ದು, ಆರೋಗ್ಯ ವರ್ಧಕ ಪದಾರ್ಥಗಳನ್ನು ಸದಾ ಸೇವಿಸಬೇಕು. ಆರೋಗ್ಯಯುಕ್ತ ಸಾವಯವ ತರಕಾರಿಯನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ಉಪಾಧ್ಯಕ್ಷೆ ಸೈಬುನ್ನೀಸ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಪ್ರೇಮಕುಮಾರಿ, ಕೃಷಿ ಇಲಾಖೆಯ ಅಧಿಕಾರಿಗಳಾದ ಮೋಹನನ್, ಜಯರಾಮ, ಉಣ್ಣಿಕೃಷ್ಣನ್ ಹಾಗೂ ಪಿ.ಜಿ. ಚಂದ್ರಹಾಸ ರೈ, ಸುಧಾಕರ ವಿದ್ಯಾಗಿರಿ ಜೊತೆಗಿದ್ದರು. ಕೃಷಿಕರೇ ತಯಾರಿಸಿದ ಸಾವಯವ ತರಕಾರಿಗಳನ್ನು 10 ಶೇಕಾಡ ಹೆಚ್ಚಿನ ಬೆಲೆಗೆ ಖರೀದಿಸಿ, ಗ್ರಾಹಕರಿಗೆ 30% ಕಡಿಮೆ ದರಕ್ಕೆ ತರಕಾರಿ ವಸ್ತುಗಳು ಲಭಿಸಲಿವೆ.


