ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆಯ ವರದಿಯಂತೆ 85 ಜನರಿಗೆ ಕೋವಿಡ್ ಖಚಿತವಾಗಿದ್ದು ಈ ಮೂಲಕ ಜಿಲ್ಲೆಯ ಒಟ್ಟು ಕೋವಿಡ್ ಬಾಧಿತರ ಸಂಖ್ಯೆ 3,976 ಕ್ಕೆ ಏರಿಕೆಯಾಗಿದೆ. ಇದರಲ್ಲಿ ವಿದೇಶದಿಂದ 510 ಮತ್ತು ಇತರ ರಾಜ್ಯಗಳಿಂದ ಆಗಮಿಸಿದ 363 ಮಂದಿ ಒಳಗೊಂಡಿದ್ದಾರೆ. ಸಂಪರ್ಕದ ಮೂಲಕ 3,103 ಜನರಲ್ಲಿ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಜುಲೈ ಎರಡನೇ ವಾರದಿಂದ ಹೆಚ್ಚಿನ ಸಂಪರ್ಕ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ, ದೈನಂದಿನ ಪ್ರಕರಣಗಳಲ್ಲಿ ಶೇ. 95 ಕ್ಕಿಂತ ಹೆಚ್ಚು ಮಂದಿ ಸಂಪರ್ಕದ ಮೂಲಕ ಸೋಂಕಿಗೊಳಗಾದವರಾಗಿದ್ದಾರೆ. ವಿಶೇಷವೆಂಬಂತೆ ಕಳೆದ ಆರು ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಮೂಲ ಪತ್ತೆಯಾಗದ ಯಾವುದೇ ಸೋಂಕಿತರು ಕಂಡುಬಂದಿಲ್ಲ.
ಇಲ್ಲಿಯವರೆಗೆ 2889 ಮಂದಿಯಲ್ಲಿ ಕೋವಿಡ್ ಋಣಾತ್ಮಕ ಟೆಸ್ಟ್ ವರದಿಯಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 30 ಕ್ಕೆ ಏರಿದೆ. ಭಾನುವಾರ ಸಂಪರ್ಕದ ಮೂಲಕ 83 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ವಿದೇಶದಿಂದ ಮತ್ತು ಬೇರೆ ರಾಜ್ಯದಿಂದ ಬಂದವರಲ್ಲೂ ಸೋಂಕು ಪತ್ತೆಯಾಗಿದೆ. 51 ಜನರಿಗೆ ನಕಾರಾತ್ಮಕವಾಗಿತ್ತು. ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿರುವವವರ ಒಟ್ಟು ಸಂಖ್ಯೆ 5,336. ಈ ಪೈಕಿ ಮನೆಗಳಲ್ಲಿ 4,342 ಮತ್ತು ಕೋವಿಡ್ ಕೇಂದ್ರಗಳಲ್ಲಿ 994 ಮಂದಿ ನಿರೀಕ್ಷಣೆಯಲ್ಲಿದ್ದಾರೆ. ನಿನ್ನೆ ಹೊಸತಾಗಿ 375 ಮಂದಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ ಇತರ ಒಟ್ಟು 1,273 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.


