ಮಂಜೇಶ್ವರ: 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಮಂಜೇಶ್ವರದ ಹೊಸಂಗಡಿಯಲ್ಲಿ ಈ ಭಾರಿ ಸರಳ ರೀತಿಯಲ್ಲಿ ಒಂದೇ ದಿನ ಆಚರಿಸಲಾಗುತ್ತಿದೆ.
ಕಳೆದ 39 ವರ್ಷಗಳಿಂದ ಸಾರ್ವಜನಿಕರ ಸಹಕಾರದಿಂದ 4 ದಿನಗಳ ತನಕ ನಿರಂತರವಾಗಿ ಆಚರಿಸಲ್ಪಟ್ಟಿದ್ದ ಸಾರ್ವಜನಿಕ ಮಂಜೇಶ್ವರ ಗಣೇಶೋತ್ಸವವು ಈ ವರ್ಷ ಕರೊನ ಮಹಾಮಾರಿಯಿಂದಾಗಿ ಸರ್ಕಾರದ ಕೋವಿಡ್ 19 ಜಾಗೃತ ನಿಬಂಧನೆಯೊಂದಿಗೆ ಹೊಸಂಗಡಿಯ ಶ್ರೀಅಯ್ಯಪ್ಪ ಕ್ಷೇತ್ರದಲ್ಲಿ ಶನಿವಾರ ಆಗಸ್ಟ್ 22ರಂದು ಸರಳವಾಗಿ ಒಂದೇ ದಿನ ಆಚರಿಸಲ್ಪಡುತ್ತಿದೆ.
ಇದರಂಗವಾಗಿ ಶನಿವಾರ ಬೆಳಿಗ್ಗೆ 7ಗಂಟೆಗೆ ತಂತ್ರಿಗಳಾದ ವೇದಮೂರ್ತಿ ನಡಿಬೈಲು ಶ್ರೀ ಶಂಕರ ನಾರಾಯಣ ಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ ಬಳಿಕ ಗೌರಿ ಪೂಜೆ,ಗಣಪತಿ ದೇವರ ಪ್ರತಿಷ್ಠೆ, ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ನವೀನ್ ರಾಜ್ ಕೆ.ಜೆ ಯವರಿಂದ ಧ್ವಜಾರೋಹಣ, ಬಳಿಕ ಧಾರ್ಮಿಕ ಮುಂದಾಳು ಮೋಹನ್ ಶೆಟ್ಟಿ ತೂಮಿನಾಡು ಇವರ ದಿವ್ಯ ಹಸ್ತದಿಂದ ದೀಪೆÇೀಜ್ವಲನೆ, ಓಜ ಸಾಹಿತ್ಯ ಕೂಟ ಬಂಗ್ರ ಮಂಜೇಶ್ವರ ಹಾಗೂ ಶ್ರೀ ಅಯ್ಯಪ್ಪ ಸೇವಾ ಮಹಿಳಾ ವೃಂದ, ಶ್ರೀ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಭಜನೆ, ಬಳಿಕ 108 ಕಾಯಿಯ ಮಹಾಗಣಯಾಗ, ಮಧ್ಯಾಹ್ನ ಪೂರ್ಣಹುತಿ, ಮಹಾಪೂಜೆ ಜರಗಲಿದೆ.
ಕ್ಷೇತ್ರದಲ್ಲಿ ಗಣಪತಿ ದೇವರ ದರ್ಶನ ಸಾಮಾಜಿಕ ಅಂತರ ಪಾಲಿಸಿ ವಿಶೇಷ ಆರತಿ ಹಾಗೂ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿದ್ದು, ಕ್ಷೇತ್ರದ ಹೊರಗಡೆ ಸ್ಯಾನಿಟೈಸರ್ ಉಪಯೋಗಿಸಿ ಪ್ರವೇಶಿಸತಕ್ಕದ್ದು. ಮಧ್ಯಾಹ್ನ ಭೋಜನದ ವ್ಯವಸ್ಥೆ ಇರುವುದಿಲ್ಲ. ಕ್ಷೇತ್ರದೊಳಗೆ 20 ಭಕ್ತಾಧಿಗಳಿಗಿಂತ ಅಧಿಕ ಜನ ನಿಲ್ಲುವುದನ್ನು ನಿಬರ್ಂಧಿಸಲಾಗಿದೆ. ಸಂಜೆ 3.30ಕ್ಕೆ ಧ್ವಜಾವತರಣ, ವಿಸರ್ಜನಾ ಪೂಜೆ, ಭವ್ಯವಾದ ಶೋಭಯಾತ್ರೆ ಹೊರಡಲಿದೆ. ಶೋಭ ಯಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಹಣ್ಣು ಕಾಯಿ ಆರತಿಗಳನ್ನು ಮೆರವಣಿಗೆಯಲ್ಲಿ ಸ್ವೀಕರಿಸಲಾಗುವುದಿಲ್ಲ, ಎಲ್ಲೂ ನಿಲುಗಡೆಯೂ ಇರುವುದಿಲ್ಲ. ಆದರೆ ಗಣಪನ ವಾಹನ ಸಾಗುವ ಸಂಧರ್ಭದಲ್ಲಿ ತಮ್ಮ ತಮ್ಮ ಮನೆಗಳಲ್ಲೇ ದೀಪ ಬೆಳಗಿಸಿ ಅಲ್ಲಿಂದಲೇ ಸ್ವತಃ ಆರತಿಯೆತ್ತಿ ಕೈಮುಗಿದು ದೇವರ ದರ್ಶನ ಮಾಡಬಹುದಾಗಿದೆ. ಯಾವುದೇ ಕಾರಣಕ್ಕೂ ಸಿಡಿಮದ್ದು ಸುಡುವುದಾಗಲಿ ಗುಂಪುಸೇರಿ ನಿಲ್ಲುವುದಾಗಲಿ, ರಸ್ತೆ ಬದಿಯಲ್ಲಿ ಧ್ವನಿ ವರ್ಧಕವನ್ನು ಇಡುವುದಾಗಲಿ ಮಾಡಬಾರದು. ಶೋಭ ಯಾತ್ರೆಯಲ್ಲಿ ಸಾಗಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ಸಾಧ್ಯವಿರುವುದಿಲ್ಲ. ಶೋಭ ಯಾತ್ರೆಯು ಹೊಸಂಗಡಿ ಪೇಟೆಗೆ ತೆರಳಿ ಬಳಿಕ ಅಲ್ಲಿಂದ ರೈಲ್ವೆ ಗೇಟ್ ಮೂಲಕ ಮಂಜೇಶ್ವರ ಒಳ ಪೇಟೆಯ ರಸ್ತೆಯಲ್ಲಿ ದೈವ, ದೇವಸ್ಥಾನ, ಮಂದಿರ, ಗುಡಿ, ಕಟ್ಟೆ, ಮನೆಗಳ ಮುಂಭಾಗದಲ್ಲಾಗಿ ಸಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಉದ್ಯಾವರದಿಂದ ತೂಮಿನಾಡು ಕಣ್ವತೀರ್ಥ ಮಠದ ಮಹಾದ್ವಾರದ ಮೂಲಕ ಸಾಗಿ ಸಮೀಪ ಕಣ್ವತೀರ್ಥ ಶ್ರೀರಾಮ ಸಮುದ್ರದಲ್ಲಿ ಗಂಗಾರ್ಪಣಗೊಳ್ಳಲಿದೆ. ಪೂಜಿಸಿದ ಗಣಪನನ್ನು ಕೇವಲ ಭಕ್ತಿಪೂರ್ವಕ ವಾತಾವರಣದಲ್ಲಿ ವಿಸರ್ಜನೆ ಮಾಡುವುದಷ್ಟೇ ಸಮಿತಿಯ ಉದ್ದೇಶವಾಗಿದ್ದು ಆಸ್ತಿಕರು ಸಹಕರಿಸಬೇಕು ಎಂದು 40 ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ನವೀನ್ ರಾಜ್ ಕೆ.ಜೆ.ಮಂಜೇಶ್ವರ, ಪ್ರಧಾನ ಸಂಚಾಲಕ ಪದ್ಮನಾಭ ಕಡಪ್ಪರ, ಪ್ರದಾನ ಕಾರ್ಯದರ್ಶಿ ಅವಿನಾಶ್ ಹೆಗ್ಡೆ, ಕೋಶಾಧಿಕಾರಿ ಸುದೀನ್ ವರ್ಕಾಡಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

