ಕಾಸರಗೋಡು: ಸುಭಿಕ್ಷ ಕೇರಳಂ ಯೋಜನೆಯ ಕಾಸರಗೋಡು ಜಿಲ್ಲಾ ಮಟ್ಟದ ದಾಖಲೀಕರಣ ಆರಂಭಗೊಂಡಿದೆ.
ನೀಲೇಶ್ವರ ಕಡಿಂಙಮೂಲೆಯಲ್ಲಿ ಯೋಜನೆಯ ಅಂಗವಾಗಿ ಬಂಜರು ಜಾಗದಲ್ಲಿ ಕೃಷಿ ನಡೆಸಿ ಕೊಯ್ಲು ನಡೆಸುವ ವರೆಗಿನ ದಾಖಲೀಕರಣ ನಡೆಯಲಿದೆ. ಸಿ.ಪಿ.ಸಿ.ಆರ್.ಐ. ಪ್ರಧಾನ ವಿಜ್ಞಾನಿ ಡಾ.ಪಿ.ತಂಬಾನ್ ಅವರ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳ ಸಹಕಾರದೊಂದಿಗೆ ಈ ದಾಖಲೀಕರಣ ಪ್ರಕ್ರಿಯೆ ನಡೆಯಲಿದೆ. ಬಂಜರು ಜಾಗದಲ್ಲಿ ಕೃಷಿ ಸಾಧ್ಯತೆ, ಈ ಯೋಜನೆ ಮೂಲಕ ಕೃಷಿ ನಡೆಸುವ ಯತ್ನದ ಎಲ್ಲ ಅನುಭವಗಳನ್ನೂ ಪ್ರತಿ ಹಂತದಲ್ಲಿ ದಾಖಲೀಕರಣ ನಡೆಸಲಾಗುವುದು. ಪ್ರತಿ ಬ್ಲೋಕ್ ಪಂಚಾಯತ್ ನ ಯುವಜನ ಒಕ್ಕೂಟ, ಆನಿವಾಸಿಗಳು, ಕುಟುಂಬಶ್ರೀ, ಖಾಸಗಿ ವ್ಯಕ್ತಿಗಳು ಮೊದಲಾದ ಬೇರೆ ಬೇರೆ ವಿಭಗಗಳ ಮಂದಿ ಕೃಷಿ ನಡೆಸಿದ ಆಯ್ದ ಪ್ರದೇಶಗಳ ದಾಖಲೀಕರಣ ಇಲ್ಲಿ ಮಹತ್ವಿಕೆ ಪಡೆಯಲಿದೆ.
ನೀಲೇಶ್ವರ ಬ್ಲಾಕ್ ನಲ್ಲಿ ತ್ರಿಕರಿಪುರ, ಕಯ್ಯೂರು-ಚೀಮೇನಿ, ಪಿಲಿಕೋಡ್, ನೀಲೇಶ್ವರ ಸ್ಥಳೀಯಾಡಳಿತೆ ಸಂಸ್ಥೇಗಳ ಹತ್ತು ಕೃಷಿ ತಾಣಗಳನ್ನು ದಾಖಲೀರಣಕ್ಕಾಗಿ ಆಯ್ಕೆ ಮಾಡಲಾಗಿದೆ. ಭತ್ತ, ತರಕಾರಿಮ ಗೆಡ್ಡೆ-ಗೆಣಸು ಬೆಳೆಗಳನ್ನು ಪ್ರಧಾನವಾಗಿ ಈ ವೇಳೆ ದಾಖಲೀಕರಿಸಲಾಗುವುದು. ಇದರ ಮೊದಲ ಅಂಗವಾಗಿ ನೀಲೇಶ್ವರ ಕಡಿಂಙಮೂಲೆಯಲ್ಲಿ ಕೃಷಿ ಒಕ್ಕೂಟ ವತಿಯಿಂದ ನಡೆಸಲಾಗುವ ಕೃಷಿ ಜಾಗವನ್ನು ಡಾ.ಪಿ.ತಂಬಾನ್ ಅವರ ನೇತೃತ್ವದ ಪರಿಣತರ ತಂಡ ಸಂದರ್ಶನ ನಡೆಸಿದೆ. ಇಲ್ಲಿನ 70 ಸೆಂಟ್ಸ್ ಬಂಜರು ಜಾಗವನ್ನು ಹಸನುಗೊಳಿಸಿ "ಏಳೋಂ-2" ಎಂಬ ಭತ್ತದ ಕೃಷಿ ನಡೆಸಲಾಗುವುದು. ಪಿ.ವಿ.ಗೋವಿಂದನ್ ನೇತೃತ್ವದ ಕೃಷಿ ಒಕ್ಕೂಟದ ಮಾಹಿತಿಗಳನ್ನು ನೇರವಾಗಿ ಈ ತಂಡ ಸಂಗ್ರಹಿಸಿದೆ. ಈ ಹಿಂದೆ ಬಂಜರು ಜಾಗದಲ್ಲಿ ಕೃಷಿ ನಡೆಸಿ ಯಶೋಗಾಥೆ ರಚಿಸಿದ ಶ್ರೇಯಸ್ಸೂ ಈ ಕೃಷಿ ಒಕ್ಕೂಟಕ್ಕಿದೆ. 4 ವರ್ಷಗ ಹಿಂದೆ ಖಾಸಗಿ ವ್ಯಕ್ತಿಯೊಬ್ಬರ ಮಾಲೀಕತ್ವದ ಎರಡೂವರೆ ಹೆಕ್ಟೇರ್ ಬಂಜರು ಜಾಗದಲ್ಲಿ ತರಕಾರಿ ಕೃಷಿ ನಡೆಸಿ ಇವರು ಯಶಸ್ಸು ಕಂಡಿದ್ದರು. ನಂತರ ಈ ಜಾಗದಲ್ಲಿ ಮಾಲೀಕರೇ ಈ ತರಕಾರಿ ಕೃಷಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಪರಪ್ಪ ಬ್ಲಾಕ್ ನ ಕಿನಾನೂರು-ಕರಿಂದಳಂ, ಕೋಡೋಂ-ಬೇಳೂರು, ಬಳಾ, ಈಸ್ಟ್ ಏಳೇರಿ, ವೆಸ್ಟ್ ಏಳೇರಿ ಪಂಚಾಯತ್ ಗಳ 9 ಕೃಷಿ ತಾಣಗಳನ್ನು ದಾಖಲೀಕರಣಕ್ಕಾಗಿ ಆಯ್ಕೆ ಮಾಡಲಾಗಿದೆ. ಇದರ ಅಂಗವಾಗಿ ನೀರಾಮಾಳಂ ನಿವಾಸಿ ಕೃಷಿಕ ಜೋಸೆಫ್ ಜಾರ್ಜ್ ಅವರ ಕೃಷಿ ಜಾಗವನ್ನು ಡಾ.ಪಿ.ತಂಬಾನ್ ನೇತೃತ್ವದ ತಂಡ ಸಂದರ್ಶಿಸಿದೆ. ಜೋಸೆಫ್ ಜಾರ್ಜ್ ಅವರ 2.2 ಎಕ್ರೆ ತೆಂಗಿನತೋಟದಲ್ಲಿ ಎಡೆಬೆಳೆಯಾಗಿ ಒಂದೂಮುಕ್ಕಾಲು ಎಕ್ರೆ ಭತ್ತ ಮತ್ತು ಉಳಿದ ಜಾಗದಲ್ಲಿ ಮರಗೆಣಸು ಕೃಷಿ ನಡೆಸಲಾಗುತ್ತಿದೆ. ಜೊತೆಗೆ ಮನೆಯ ಆವರಣದಲ್ಲಿ ತರಕಾರಿ, ಗೆಣಸು ಕೃಷಿ ನಡೆಸುತ್ತಿದ್ದಾರೆ. ತಮ್ಮ ಈ ಸಾಧನೆಗೆ ರಾಜ್ಯ ಸರಕಾರದ ಸುಭಿಕ್ಷ ಕೇರಳಂ ಯೋಜನೆ ಪ್ರೇರಣೆ ಎಂದು ಜೋಸೆಫ್ ಅವರು ಅಭಿಪ್ರಾಯಪಡುತ್ತಾರೆ.


