ಕಾಸರಗೋಡು:ಕೋವಿಡ್ ಸಂಹಿತೆಗಳ ಅನುಷ್ಠಾನಕ್ಕಾಗಿ ವಿವಿಧ ಹಂತಗಳ ಸಂವಹನ ಜಾಗೃತಿ ಚಟುವಟಿಕೆಗಳನ್ನು ಸಂಘಟಿಸಲು ಜಿಲ್ಲಾ ಮಟ್ಟದಲ್ಲಿ ಐಇಸಿ ಸಮನ್ವಯ ಸಮಿತಿ ರಚಿಸಲಾಯಿತು.
ಸಮನ್ವಯ ಸಮಿತಿ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಸಂಚಾಲಕರಾಗಿ ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಎಡಿಎಂ ಎನ್. ದೇವಿದಾಸ್, ಜಿಲ್ಲಾ ಸಮೂಹ ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್, ನೈರ್ಮಲ್ಯ ಮಿಷನ್ ಜಿಲ್ಲಾ ಸಹಾಯಕ ಸಂಯೋಜಕ ಪ್ರೇಮರಾಜನ್, ಮಾಶ್ ಯೋಜನಾ ಸಂಯೋಜಕ ಪಿ.ದೀಲೀಪ್ ಕುಮಾರ್, ಕೇರಳ ಸಾಮಾಜಿಕ ಭದ್ರತಾ ಮಿಷನ್ ಸಂಯೋಜಕ ಜಿಶೋ ಜೇಮ್ಸ್, ಹಿರಿಯ ಅಧೀಕ್ಷಕ ಕೆ.ಜಿ.ಮೋಹನನ್, ರಜೀಶ್, ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರತಿನಿಧಿ ಕಮಲ್ ಜೋಸ್ ಸಮಿತಿಯ ಪದಾಧಿಕಾರಿಗಳಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಜಿಲ್ಲಾ ಮಾಹಿತಿ ಕಚೇರಿ ಮತ್ತು ಆರೋಗ್ಯ ಇಲಾಖೆಯ ಮಾಸ್ ಮೀಡಿಯಾ ವಿಭಾಗದ ಐಇಸಿ ಸಿಬ್ಬಂದಿಗಳು ಸಮಿತಿಯ ಉಸ್ತುವಾರಿ ವಹಿಸಲಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ವೈವಿಧ್ಯಮಯ ಜಾಗೃತಿ ಚಟುವಟಿಕೆ ನಡೆಸಲಾಗುವುದು.ಪ್ರಮುಖ ನೇತಾರರು, ಖ್ಯಾತ ಗಣ್ಯರು ಮತ್ತು ಆಡಳಿತಾಧಿಕಾರಿಗಳು ಜಾಗೃತಿ ಸಂದೇಶ ನೀಡಲಿದ್ದು ಏಳು ಭಾಷೆಗಳ ಜಾಗೃತಿ ವೀಡಿಯೊ ಶೀಘ್ರ ಬಿಡುಗಡೆ ಯಾಗಲಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‍ಗಳ ರೂಪದಲ್ಲಿ ವ್ಯಾಪಕ ಪ್ರಚಾರ ಪ್ರಾರಂಭಿಸಲಾಗಿದೆ.
'ನಮ್ಮ ಓಣಂ ಹಬ್ಬಕ್ಕೆ ಊರಿನ ಹೂವುಗಳ ಅಭಿಯಾನ' ಈಗಾಗಲೇ ಆರಂಭಿಸಲಾಗಿದ್ದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮೊದಲ ಸಂದೇಶ ನೀಡುವ ಮೂಲಕ ಅಭಿಯಾನ ಉದ್ಘಾಟಿಸಿದ್ದಾರೆ.ಓಣಂ ಆಚರಣೆಯ ಸಂದರ್ಭದಲ್ಲಿ, ಕೋವಿಡ್ ಹರಡುವಿಕೆ ತಡೆಗಟ್ಟಲು ಜಾಗೃತಿ ಸಂದೇಶ ನೀಡಲಾಗುವುದು.


