ಕಾಸರಗೋಡು: ಗುಡ್ಡಗಾಡು ಪ್ರದೇಶದಲ್ಲಿ ಬರಡು ನೆಲದಲ್ಲಿ ಭತ್ತದ ಗದ್ದೆಗಳು, ತರಕಾರಿ ತೋಟಗಳು ಮತ್ತು ಪಪ್ಪಾಯಿ ಕೃಷಿ ಮೊದಲಾದವುಗಳು ಸರ್ಕಾರದ ಮಹತ್ವಾಕಾಂಕ್ಷೆಯ ಸುಭಿಕ್ಷ ಕೇರಳ ಯೋಜನೆಯನ್ವಯ ಹಸಿರುಗೊಂಡು ಹಿರಿಮೆಗೆ ಕಾರಣವಾಗಿದೆ.
ಪರಪ್ಪ ಬ್ಲಾಕ್ ಪಂಚಾಯತ್ ನಲ್ಲಿ ಮಾತ್ರ 55.4 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆಯನ್ವಯ ಭತ್ತದ ಬೇಸಾಯ ಸಫಲತೆಯತ್ತ ಸಾಗಿದೆ. ಇದರಲ್ಲಿ ಹೆಚ್ಚಿನವು ಒಣಭೂಮಿ ಕೃಷಿಯಾಗಿದೆ. ಜೊತೆಗೆ ಮರಗೆಣಸು, ಮತ್ತು ಸುವರ್ಣ ಗಡ್ಡೆ ಬೆಳೆಗಳನ್ನು 129 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ತರಕಾರಿಗಳಲ್ಲಿ ಸ್ವಾವಲಂಬನೆ ಖಚಿತಪಡಿಸಿಕೊಳ್ಳಲು, ದ್ವಿದಳ ಧಾನ್ಯಗಳು, ಸೌತೆಕಾಯಿ, ಕಡಲೆ, ಬಿಳಿಬದನೆ, ಈರುಳ್ಳಿ ಮತ್ತು ಮೆಣಸಿನಕಾಯಿಗಳನ್ನು ಸಹ 42 ಹೆಕ್ಟೇರ್ ಭೂಮಿಯಲ್ಲಿ ಬೆಳೆಸಲಾಗುತ್ತಿದೆ. ಅಲ್ಲದೆ ಪ್ರತಿ ಮನೆಗಳಲ್ಲೂ ಕೈತೋಟ ಗಳನ್ನೂ ನಿರ್ಮಿಸಲಾಗಿದೆ. ಪಾಳುಭೂಮಿಯನ್ನು ಹೊರತುಪಡಿಸಿ ಮಿಕ್ಕಡೆಗಳಲ್ಲಿ ಬಾಳೆ, ಶುಂಠಿ, ಅರಿಶಿನ, ತರಕಾರಿಗಳು ಮೊದಲಾದವುಗಳನ್ನು 380 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.
ಕೃಷಿ ಪ್ರಾರಂಭಿಸಲು ಬೇಕಾದ ಬೀಜಗಳನ್ನು ಕೃಷಿ ಭವನಗಳ ಮೂಲಕ ವಿತರಿಸಲಾಗಿತ್ತು. ಅಲ್ಲದೆ ಬೀಜಗಳನ್ನು ಸಂಗ್ರಹಿಸಿ ಸಾಂಪ್ರದಾಯಿಕ ರೈತರಿಂದ ಸ್ಥಳೀಯವಾಗಿ ವಿತರಿಸಲಾಯಿತು. ಭತ್ತದ ಬೀಜಗಳನ್ನು ಸಂಪೂರ್ಣವಾಗಿ ಕೃಷಿ ಇಲಾಖೆಯಿಂದ ನೀಡಲಾಗುತ್ತದೆ.
ಸುಭಿಕ್ಷ ಕೇರಳ ಯೋಜನೆಯಡಿ ಜಿಲ್ಲೆಯ ಅತ್ಯುತ್ತಮ ಚಟುವಟಿಕೆಗಳನ್ನು ಪರಪ್ಪ ಬ್ಲಾಕ್ ಪಂಚಾಯತ್‍ನಲ್ಲಿ ಜಾರಿಗೊಳಿಸಲಾಗುತ್ತಿದೆ. ಭತ್ತ ಮತ್ತು ತರಕಾರಿಗಳನ್ನು ಹೇರಳವಾಗಿ ಬೆಳೆಸಲು ಮುಂದೊತ್ತಿದೆ. ಬೆಳೆಗಳಿಗೆ ಪೂರಕವಲ್ಲದ ಮರಳುಗಲ್ಲಿನ ಮೇಲೆ ಚೀಲಗಳನ್ನು ಬಳಸಿ ತರಕಾರಿ ಕೃಷಿ ಮಾಡಲಾಗುತ್ತಿದೆ. ಕೋಡೋಂ ಬೆಳ್ಳೂರು ಮತ್ತು ಕಳ್ಳಾರ್ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಬಂಜರು ಭೂಮಿಗಳನ್ನು ವಿಶೇಷವಾಗಿ ಗುರುತಿಸಿ ಅದನ್ನು ಕೇಂದ್ರೀಕರಿಸಿ ಕೃಷಿಗೆ ಯೋಗ್ಯಗೊಳಿಸಿದೆ. ಹೆಚ್ಚಿನ ಜನರು ಪಶುಸಂಗೋಪನೆ, ಅದರಲ್ಲೂ ಕ್ಷೀರ ಕೃಷಿ ಮತ್ತು ಜಲಚರ(ಮೀನು) ಸಾಕಣೆ ಕ್ಷೇತ್ರಗಳಿಗೆ ಇಳಿಯಲು ಉತ್ಸುಕತೆ ಹೊಂದಿದ್ದಾರೆ. ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ 89 ಫ್ಲಾಟ್ ಕೊಳಗಳು ಮತ್ತು 32 ಬಯೋಫೆÇ್ಲೀಕ್ ಕೊಳಗಳನ್ನು ನಿರ್ಮಿಸಿ ಕೃಷಿ ಮಾಡಲಾಗುತ್ತಿದೆ.
ಕರೊನಾ ಕಾರಣ ಉದ್ಯೋಗ ಕಳೆದುಕೊಂಡವರಿಗೆ, ವಲಸಿಗರಿಗೆ ಮತ್ತು ವಿವಿಧ ಕಾರಣಗಳಿಂದ ಉದ್ಯೋಗ ರಹಿತರಾಗಿರುವವರಿಗೆ ಸುಭಿಕ್ಷ ಕೇರಳ ಯೋಜನೆ ಕೇವಲ ಸಮಯ ಕಳೆಯಲು ಮಾತ್ರ ಸೀಮಿತವಾಗದೆ ಹೊಸ ಜೀವನ ವಿಧಾನ, ಸ್ವಾವಲಂಬಿ ಬದುಕಿಗೆರ ದಾರಿ ಮಾಡಿಕೊಟ್ಟಿದೆ. ನಮಗೆ ಬೇಕಾದುದನ್ನು ನಾವೇ ಬೆಳೆಸುವ ದೃಢ ಸಂಕಲ್ಪದಿಂದ ಯೋಜನೆ ಯಶಸ್ಸಿನತ್ತ ದಾಪುಗಾಲಿಡುತ್ತಿದೆ ಎಂದು ಪರಪ್ಪ ಕೃಷಿ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಎಲ್.ಸುಮಾ ಯಶೋಗಾಥೆಗಳನ್ನು ಬಿಚ್ಚಿಟ್ಟರು. ಇಲ್ಲಿ ಬೆಳೆಸಿದ ತರಕಾರಿಗಳು ಪ್ರಸ್ತುತ ಓಣಂ ಮಾರುಕಟ್ಟೆಯಲ್ಲಿಯೂ ಲಭ್ಯವಿರುತ್ತವೆ ಎಂದು ಅವರು ತಿಳಿಸಿರುವರು.


