ಮಂಜೇಶ್ವರ: ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ ಹಾಗೂ ಪುತ್ರ ದಾರುಣರಾಗಿ ಮ್ರತಪಟ್ಟ ಘಟನೆ ವರ್ಕಾಡಿ ವಿದ್ಯುತ್ ವಿಭಾಗೀಯ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಬೋಳಂತಕೋಡಿ ನಿವಾಸಿ,ಅಟೋ ಚಾಲಕ ವಿಶ್ವನಾಥ ಎಂಬವರ ಪತ್ನಿ ವಿಜಯ(30)ಹಾಗೂ ಪುತ್ರ ಆಶ್ರಯ್(6) ಮ್ರತರಾದ ನತದ್ರಷ್ಟರು. ಮನೆಯ ಸಮೀಪದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದ್ದ ಪುತ್ರನನ್ನು ರಕ್ಷಿಸಲು ಧಾವಿಸಿದ ತಾಯಿಗೂ ವಿದ್ಯುತ್ ಆಘಾತಗೊಂಡು ಇಬ್ಬರೂ ಸ್ಥಳದಲ್ಲೇ ಮ್ರತಪಟ್ಟರು. ಮ್ರತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.ಮಂಜೇಶ್ವರ ಪೋಲೀಸರು ಸ್ಥಳ ಸಂದರ್ಶನ ನಡೆಸಿ ಪ್ರಕರಣ ದಾಖಲಿಸಿದರು.
ಕೆಲವು ದಿನಗಳ ಹಿಂದೆಯೇ ತಂತಿ ಕಡಿದು ಬಿದ್ದಿದ್ದು,ಇಲಾಖೆಗೆ ಮಾಹಿತಿ ನೀಡಿದ್ದರೂ ದುರಸ್ಥಿ ಕಾರ್ಯ ನಡೆಸಿಲ್ಲ ಎನ್ನಲಾಗಿದೆ. ದಶಕಗಳ ಹಿಂದೆ ವೇದೋಡಿ ಪರಿಸರದಲ್ಲಿ ಕಡಿದುಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಹತ್ತರಷ್ಟು ಮಕ್ಕಳು ಸ್ಥಳದಲ್ಲೇ ಮ್ರತಪಟ್ಟಿದ್ದು ಇಲ್ಲಿ ಉಲ್ಲೇಖಾರ್ಹ.