ಕಾಸರಗೋಡು: ಹಿರಿಯ ನಾಗರಿಕರಿಗಾಗಿ ಜಾರಿಗೊಳಿಸುವ "ಗ್ರಾಂಡ್ ಕೇರ್" ಕಾರ್ಯಕ್ರಮಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಚಾಲನೆ ಲಭಿಸಿದೆ.
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯ ಸರಕಾರ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಹೈ ರಿಸ್ಕ್ ವಿಭಾಗಕ್ಕೆ ಸೇರಿರುವ ಹಿರಿಯ ಪ್ರಜೆಗಳ ದೈಹಿಕ-ಮಾನಸಿಕ ರೋಗ್ಯ ಖಚಿತಪಡಿಸುವ, ಕೋವಿಡ್ ರೋಗ ಬಾಧೆ ಉಂಟಾಗದಂತೆ ನೋಡಿಕೊಳ್ಳುವ, ಇನ್ನಿತರ ರೋಗದಿಂದ ಬಳಲುತ್ತಿರುವ ಮಂದಿಯ ಬಗ್ಗೆ ಸತತವಾಗಿ ನಿಗಾ ಇರಿಸುವ ಮೂಲಕ ಆರೋಗ್ಯ ಖಚಿತಪಡಿಸುವ ಉದ್ದೇಶಗಳೊಂದಿಗೆ ಈ ಯೋಜನೆ ಜಾರಿಗೊಳ್ಳುತ್ತಿದೆ.
ಇದರ ಮೊದಲ ಹಂತವಾಗಿ ಕಾಸರಗೋಡು ಜಿಲ್ಲೆಯ ಎಲ್ಲ ವೃಧ್ಧಾಶ್ರಮಗಳಿಗೆ ಕೇರಳ ಸಮಾಜ ಸುರಕ್ಷಾ ಮಿಷನ್, ವಯೋಮಿತ್ರಂ ಯೂನಿಟ್ ನ ವೈದ್ಯಾಧಿಕರಿ ಸಹಿತ ತಂಡದ ಸದಸ್ಯರು ಭೇಟಿ ನೀಡಿ ವಯೋವೃದ್ಧ ರನ್ನು ತಪಾಸಣೆಗೊಳಪಡಿಸಿದ ಅಗತ್ಯವಿರುವ ಔಷಧಗಳ ವಿತರಣೆ ನಡೆಸಿದ್ದಾರೆ. ಜಿಲ್ಲೆಯ ಒಟ್ಟು 20 ವೃದ್ಧಾಶ್ರಮಗಳ 927 ಮಂದಿಯನ್ನು ಆಂಟಿಜೆನ್ ಟೆಸ್ಟ್ ಗೂ ಒಳಪಡಿಸಲಾಗಿದೆ. ರೋಗ ಲಕ್ಷಣ ಹೊಂದಿರುವವರನ್ನು ಪತ್ತೆ ಮಾಡಿ ಅವರಿಗೆ ಚಿಕಿತ್ಸೆ ಒದಗಿಸುವುದು, ಇತರರನ್ನು ರೋಗಬಾಧೆಯಿಂದ ಸಂರಕ್ಷಿಸುವುದು ಇಲ್ಲಿನ ಉದ್ದೇಶವಾಗಿದೆ.
ಇದೇ ವೇಳೆ ಜಿಲ್ಲೆ ಎಲ್ಲ ಹಿರಿಯ ಪ್ರಜೆಗಳೂ ದೂರವಾಣಿ ಮೂಲಕ ಸಂಪರ್ಕ ನಡೆಸಬಹುದಾದ ಕಾಲ್ ಸೆಂಟರ್ ಆರಂಭಿಸುವ ಯೋಜನೆಯಿದೆ. ಜಿಲ್ಲಾ ಸಮಾಜ ನೀತಿ ಇಲಾಖೆಯ ಅಧಿಕಾರಿ, ನೋಡೆಲ್ ಅಧಿಕಾರಿ, ಆರೋಗ್ಯ ಇಲಾಖೆ, ಮಹಿಳಾ ಶಿಶು ಅಭಿವೃದ್ಧಿ ಇಲಾಖೆ, ಕೇರಳ ಸಮಾಜ ಸುರಕ್ಷಾ ಮಿಷನ್ ಸೇರಿರುವ ಸಮಿತಿ ಈ ಚಟುವಟಿಕೆಗಳ ಏಕೀಕರಣ ನಡೆಸುತ್ತಿವೆ.
ವೈದ್ಯಾಧಿಕಾರಿ ಡಾ.ಆಸಿಯಾ, ಸ್ಟಾಫ್ ನರ್ಸ್ ಗೀತೂ ಶ್ರೀಧರ್, ಜೆ.ಪಿ.ಎಚ್.ಎನ್.ಸಿಂಧೂ ಸಿ.ಆರ್., ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್ ಮೊದಲಾದವರು ತಪಾಸಣೆಗೆ ನೇತೃತ್ವ ವಹಿಸಿದ್ದರು.


