HEALTH TIPS

ದೇವಸ್ಥಾನದ ಸಂಕ್ರಮಣ ಪೂಜೆ: ಭಕ್ತರಿಗೆ ಹಲಸಿನ ಗಿಡಗಳೇ ಪ್ರಸಾದ...!!!

         

       ಉಪ್ಪಳ: ತುಳುನಾಡಿನ ಪ್ರತಿಯೊಂದು ಪ್ರಾಕೃತಿಕತೆಯ ಹಿಂದೆ ವಿಶೇಷತೆ, ಕಾರಣಿಕತೆ ಇದ್ದೇ ಇರುತ್ತದೆ. ಜೊತೆಗೆ ಆಧುನಿಕತೆಯ ಸ್ಪರ್ಶ ನೀಡಿದಾಗ ಹೊಸತೊಂದು ಪರಿಕಲ್ಪನೆಗೆ ನಾಂದಿಯಾಗುತ್ತದೆ ಎಂಬುದಕ್ಕೆ ಬಾಯಾರು ಹಿರಣ್ಯದ ತಿರುಮಲೇಶ್ವರ ಭಟ್ ಅವರ ಕೊಡುಗೆ ಮಹತ್ವಪೂರ್ಣವಾಗಿ ದಾಖಲಾಗಲಿದೆ.

     ಬಾಯಾರು ಹಿರಣ್ಯ ನಿಜವಾಗಿಯೂ ಹಿರಣ್ಯ(ಚಿನ್ನ) ವರ್ಣದ ಸಾಕಾರತೆಯ ಪ್ರತೀಕವೆಂಬುದಕ್ಕೆ ಸಾಕ್ಷಿಯಾಗಿದೆ. ಗಡಿನಾಡಿನ ಹಿರಣ್ಯ ಗರ್ಭ(ಬ್ರಹ್ಮ) ವೂ ಹೌದು. ಯಾಕೆಂದರೆ ಶತಮಾನಗಳಷ್ಟು ಪ್ರಾಚೀನದಿಂದಲೇ ಇಲ್ಲಿ ಕೆಂಬಣ್ಣದ ವಿಶೇಷ ಹಲಸು ತಳಿ ಬೆಳೆಯುತ್ತಿದೆ. ಆದರೆ ಅಷ್ಟೇ ಆದರೆ ವಿಶೇಷವಲ್ಲ. ಸ್ಥಳೀಯ ದೇವಾಲಯವೊಂದರಲ್ಲಿ ಭಕ್ತರಿಗೆ ಉಚಿತವಾಗಿ ವಿಶೇಷ ತಳಿಯ ಹಲಸಿನ ಗಿಡಗಳನ್ನು ಕೊಡಮಾಡಿ ಮಾದರಿಯಾದ ಘಟನೆ ದೀಗ ಶ್ಲಾಘನೆಗೊಳಗಾಗಿದೆ.

     ಬಾಯಾರು ಹಿರಣ್ಯದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಕೃತಿಯೊಳಗೆ ಶತಮಾನಗಳಷ್ಟು ಕಾಲ ಅಗೋಚರವಾಗಿದ್ದು ಇದೀಗ ಕಳೆದ ಎರಡು ವರ್ಷಗಳಿಂದ ಪುನರುಜ್ಜೀವನಗೊಂಡ  ಪುಟ್ಟ ದೇವಾಲಯ. ಇಲ್ಲಿ ಭಾನುವಾರ ಶ್ರಾವಣ (ಸೋಣ)  ಸಂಕ್ರಮಣದ ವಿಶೇಷ ಪೂಜೆ ಸಾಂಪ್ರದಾಯಿಕವಾಗಿ ಕೊರೊನಾ ನಿಬಂಧನೆಗಳ ಅನುಸಾರ ನಡೆಯಿತು. ಆದರೆ ದೇವರನ್ನಾರಾಧಿಸಿ ಪ್ರಸಾದವಾಗಿ ಭಕ್ತರಿಗೆ ನೀಡಿದ್ದು ಕೆಂಪು ಬಕ್ಕೆ ಹಲಸಿನ ಸಸಿಗಳನ್ನು!. 

       ದೇವಾಲಯಕ್ಕೆ ಬಾಯಾರು ಕಂಬಳ ಮನೆತನದ ಯಜಮಾನ್ಯತೆಯ ಉಸ್ತುವಾರಿವಹಿಸಿ ಪವಿತ್ರ ಚಕ್ರಪಾಣಿಯಾಗಿರುವ ಹಿರಣ್ಯ ತಿರುಮಲೇಶ್ವರ ಭಟ್ ಇಂತಹದೊಂದು ವಿಶೇಷ ಪ್ರಸಾದ ಕೊಡುಗೆಯ ಮೂಲಕ ಗಮನ ಸೆಳೆದರು.

     ಅವರ ತೋಟದಲ್ಲಿ 1924ರಿಂದಲೇ ವೈವಿಧ್ಯ ಹಲಸುಗಳಿವೆ. ಕುಟುಂಬದ ಹಳೆಯ ದಾಖಲೆಗಳಲ್ಲೂ ಕೆಂಪುಹಲಸಿನ ಮರದ ಉಲ್ಲೇಖ ಇದೆ. ಈ ಬಾರಿ ಈ ಹಲಸುಗಳ ಪೈಕಿ ಕೆಂಪಲಸು ಯಥೇಚ್ಛ ಫಲ ಕೊಟ್ಟಿತ್ತು. ಲಾಕ್ಡೌನ್ ಕಾಲದಲ್ಲಿ ಹಲಸು ಆಹಾರವಾದ ಕಥನಗಳನ್ನೋದಿದ್ದೇ ತಡ..ಸ್ಫೂರ್ತಿಯೊಂದಿಗೆ ಹೊಸತೊಂದು ಆಲೋಚನೆಯೂ ಹುಟ್ಟಿತು.

         ಅವರು ಕೆಂಪಲಸಿನ ಬೀಜ ಸಂಗ್ರಹಿಸಿ ಶಾಸ್ತ್ರೀಯವಾಗಿಯೇ ಗಿಡ ಮಾಡಿದರು. ಕ್ಷೇತ್ರಕ್ಕೆ ಸಂಬಂಧ ಪಟ್ಟವರಿಗೆ, ಭಕ್ತಾದಿಗಳಿಗೆ ಸಂಕ್ರಮಣ ಪೂಜೆಯ ಗಂಧಪ್ರಸಾದದ ಜೊತೆ ಅರ್ಚಕರ ಕೈಯ್ಯಿಂದಲೇ  ವಿತರಿಸಿದರು. ದೇವರ ಪ್ರಸಾದಕ್ಕೆ ಭಕ್ತರ ಮನದಲ್ಲಿ ಭಾವುಕ ಗೌರವ,ಪೂಜ್ಯತೆ ಇದ್ದೇ ಇದೆ. ಈ ಕಾರಣದಿಂದಲೇ ಕೆಂಪಲಸಿನ ಗಿಡಗಳು ಜೋಪಾನತೆಯ ಮಮತೆಯಿಂದ ಬೆಳೆಯಬಹುದು. ಭವಿಷ್ಯಕ್ಕೆ ಅಪೂರ್ವ ತಳಿಯೊಂದರ ರಕ್ಷಣೆ, ವಿಸ್ತರಣೆಯೂ ಆದೀತು. 

       ಪ್ರಸ್ತುತ 100 ರಷ್ಟು ಸಸಿಗಳನ್ನು ಬಿತ್ತನೆಮಾಡಲಾಗಿದ್ದು, ಸಂಕರಮಣದ ದಿನ ಆಗಮಿಸಿದ 20 ರಷ್ಟು ಜನರಿಗೆ ಪ್ರಸಾದ ರೂಪವಾಗಿ ಕೊಡಲಾಗಿದೆ. ಕೋವಿಡ್ ನಿಬಂಧನೆಯ ಹಿನ್ನೆಲೆಯಲ್ಲಿ ಗ್ರಾಮವಾಸಿಗಳೆಲ್ಲ ಕ್ಷೇತ್ರಕ್ಕೆ ಆಗಮಿಸಲು ಸಾಧ್ಯವಾಗದ್ದರಿಂದ ಉಳಿದ ಸಸಿಗಳನ್ನು ಭಕ್ತರ ಮನೆಗಳಿಗೆ ತಲಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿರುಮಲೇಶ್ವರ ಭಟ್ ವಿಜಯವಾಣಿಗೆ ತಿಳಿಸಿರುವರು.

          ಅಭಿಮತ: 

    ಕೋವಿಡ್ ಹಿನ್ನೆಲೆಯಲ್ಲಿ ಪ್ರಸಾದ ವಿತರಿಸುವಂತಿಲ್ಲ. ಜೊತೆಗೆ ಕೋವಿಡ್ ಕಾಲಘಟ್ಟ ಪ್ರಾಚೀನ ತುಳುನಾಡಿನ ಪರಂಪರೆಯ ಮೆಲುಕುಗಳೊಂದಿಗೆ ಮರಳುತ್ತಿದ್ದು, ಈ ಪೈಕಿ  ಹಲಸು ಪರಿಫೂರ್ಣ ಆಹಾರ ಬೆಳೆಯಾಗಿ ಖ್ಯಾತಿ ಪಡೆದಿದೆ. ಒಂದೊಮ್ಮೆ ಹಿನ್ನೆಲೆಗೆ ಸರಿದಿದ್ದರೂ ಇಂದಿಗೂ ಅದರ ಮಹತ್ವ ವಿಶೇಷವಾಗಿದೆ. ಆದ್ದರಿಂದ ಪ್ರಸಾದ ರೂಪದಲ್ಲಿ ಸಂಕ್ರಮಣದಂದು ಸಸಿಗಳನ್ನು ಸ್ಥಳೀಯ ಭಕ್ತರಿಗೆ ಉಚಿತವಾಗಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವವರಿಗೆ ವ್ಯಾಪಾರಿ ದೃಷ್ಟಿಕೋನವಿಲ್ಲದೆ ಉಚಿತವಾಗಿ ವಿತರಿಸುವ ಬಗ್ಗೆ ಕಾರ್ಯಯೋಜನೆ ಹಮ್ಮನಿಕೊಳ್ಳಲಾಗುವುದು. 

                       -ತಿರುಮಲೇಶ್ವರ ಭಟ್ ಹಿರಣ್ಯ

                         ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಪವಿತ್ರ ಚಕ್ರಪಾಣಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries