ಮಂಜೇಶ್ವರ : ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳುಗಳಿಂದ ಮುಚ್ಚಿರುವ ರಸ್ತೆಗಳನ್ನು ಸಂಚಾರ ಮುಕ್ತಗೊಳಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದರೂ ತಲಪಾಡಿ ಗಡಿ ಸಹಿತ ವಿವಿದೆಡೆಯಲ್ಲಿ ಮುಕ್ತ ಸಂಚಾರಕ್ಕೆ ಕೇರಳ ಪೋಲಿಸರು ಅನುವು ಮಾಡಿ ಕೊಡದ ಬಗ್ಗೆ ವರದಿಯಾಗಿದೆ.
ಇದನ್ನು ಖಂಡಿಸಿ ಗುರುವಾರ ಸಂಜೆ ತಲಪಾಡಿ ಗಡಿಗೆ ತಲುಪಿದ ಮಂಜೇಶ್ವರ ಮಂಡಲ ಹಾಗೂ ಜಿಲ್ಲಾ ಬಿಜೆಪಿ ಸಮಿತಿ ಪದಾಧಿಕಾರಿಗಳು ನೂರಾರು ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಿಜೆಪಿ,ಯುವಮೋರ್ಚಾ, ಒಬಿಸಿ ಮೋರ್ಚಾ ಕಾರ್ಯಕರ್ತರು ಇಂದು ಸಂಜೆ ತಲಪಾಡಿ ಗಡಿಯ ಸ್ಥಳದಲ್ಲಿ ನಿಂತು ಪೋಲಿಸರು ಮಾರ್ಗ ಮಧ್ಯೆ ಸ್ಥಾಪಿಸಿದ ಬ್ಯಾರಿಕೇಡ್ ಇನ್ನಿತರ ತಡೆಗಳನ್ನು ತೆರವುಗೊಳಿಸಿ ಮಂಗಳೂರಿಗೆ ತೆರಳುವ ಮತ್ತು ಬರುವ ವಾಹನಗಳನ್ನು ಮುಕ್ತ ಸಂಚಾರ ಯೋಗ್ಯಗೊಳಿಸಿದರು.
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷರಾದ ಮಣಿಕಂಠ ರೈ, ಜಿಲ್ಲಾ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್ ರೈ,ಒಬಿಸಿ ಮೋರ್ಚಾ ರಾಜ್ಯ ಸಮಿತಿ ಮುಖಂಡ ನ್ಯಾಯವಾದಿ ನವೀನ್ ರಾಜ್ ಕೆ.ಜೆ, ನೇತಾರರಾದ ಪದ್ಮನಾಭ ಕಡಪ್ಪರ, ಆದರ್ಶ ಬಿ.ಎಂ ಮಂಜೇಶ್ವರ, ಯುವ ಮೋರ್ಚಾ ಕಾಸರಗೋಡು ಜಿಲ್ಲಾ ಅದ್ಯಕ್ಷರಾದ ಧನಂಜಯ ಮದೂರು, ಯುವ ಮೋರ್ಚಾ ಮಂಜೇಶ್ವರ ಮಂಡಲ ಅದ್ಯಕ್ಷ ಚಂದ್ರಕಾಂತ್ ಶೆಟ್ಟಿ, ಪದಾಧಿಕಾರಿಗಳಾದ ಅವಿನಾಶ್ ಪ್ರತಾಪನಗರ, ದೀಕ್ಷಿತ್ ಐಲ,ಸಂಪತ್ ಮಯ್ಯ ಮೊದಲಾದವರು ನೇತೃತ್ವವಹಿಸಿದರು.


