ಕಾಸರಗೋಡು: ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಪಾಸ್ ಅಥವಾ ಅನುಮತಿ ಅಗತ್ಯವಿಲ್ಲವೆಂದು ಕೇಂದ್ರ ಗ್ರಹ ಖಾತೆ ಕಾರ್ಯದರ್ಶಿ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಗಡಿಗಳನ್ನು ತೆರೆದು ಜನರಿಗೆ ಮುಕ್ತ ಸಂಚಾರ ಸ್ವಾತಂತ್ರ್ಯವನ್ನು ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಕೇರಳ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕೇಂದ್ರದ ಆದೇಶದ ಪಾಲನೆ ಕೂಡಲೇ ಮಾಡಬೇಕು. ಗಡಿ ಬಂದಿನಿಂದಾಗಿ ಕಾಸರಗೋಡು ಜಿಲ್ಲೆಯ ಜನರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಶೀಘ್ರವೇ ಪರಿಹಾರ ಕಾಣಲು ರಾಜ್ಯ ಸರ್ಕಾರ ತಯಾರಾಗಬೇಕೆಂದು ಶ್ರೀಕಾಂತ್ ಆಗ್ರಹಿಸಿದ್ದಾರೆ.
ಅನ್ ಲಾಕ್ 03 ಮಾರ್ಗಸೂಚಿ ಪ್ರಕಾರ ಅಂತಾರಾಜ್ಯ ಪ್ರಯಾಣಕ್ಕೆ ಪಾಸಿನ ಅಗತ್ಯವಿಲ್ಲ ಎಂಬ ಆದೇಶವಿದ್ದರೂ ಕಾಸರಗೋಡು ಜಿಲ್ಲೆಯಲ್ಲಿ ಇದಕ್ಕೆ ವಿರುದ್ಧವಾಗಿ ಕಟ್ಟನಿಟ್ಟಿನ ಷರತ್ತುಗಳೊಂದಿಗೆ ಪಾಸಿನ ವ್ಯವಸ್ಥೆಯನ್ನು ಮಾಡಿರುವುದು ಕಾನೂನು ಬಾಹಿರವೆಂದು ಕೇಂದ್ರದ ಹೊಸ ಆದೇಶದೊಂದಿಗೆ ಸ್ಪಷ್ಟವಾಗಿದೆ ಎಂದು ಶ್ರೀಕಾಂತ ಹೇಳಿರುವರು.


