ಕಾಸರಗೋಡು: ಮಳೆನೀರು ಕಟ್ಟಿ ನಿಂತ ಜಾಗಗಳಲ್ಲಿ ಗಪ್ಪಿ ಮೀನುಗಳನ್ನು ಹೂಡಿಕೆ ನಡೆಸಿ ಕುಂಬಳೆ ಸಿ.ಎಚ್.ಸಿ. ವತಿಯಿಂದ ವಿಶಿಷ್ಟ ರೀತಿಯಲ್ಲಿ ವಿಶ್ವ ಸೊಳ್ಳೆ ನಿವಾರಣೆ ದಿನ ಆಚರಿಸಲಾಯಿತು.
ಜೊತೆಗೆ ಜನಜಾಗೃತಿ, ಸೊಳ್ಳೆ ಸಂತಾನೋತ್ಪತ್ತಿ ಜಾಗಗಳ ನಾಶ, ಆನ್ ಲೈನ್ ಮೂಲಕ ಸಭೆ ಇತ್ಯಾದಿ ಕಾರ್ಯಕ್ರಮಗಳೂ ಈ ಕಾರ್ಯಕ್ರಮದ ಅಂಗವಾಗಿ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.
ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗೆ, ಆನೆಕಾಲು ಸಹಿತ ರೋಗಗಳ ವಿರುದ್ಧ ಜನಜಾಗೃತಿ ಮೂಡಿಸುವ ಮೂಲಕ ಸೊಳ್ಳೆ ನಿವಾರಣೆ ದಿನವನ್ನು ಆಚರಿಸುವುದು ಇಲ್ಲಿನ ಉದ್ದೇಶ. ಕುಂಬಳೆ ಆರೋಗ್ಯ ಬ್ಲೋಕ್ ನಲ್ಲಿ ಜುಲೈ ತಿಂಗಳಲ್ಲಿ 82 ಡೆಂಗೆ ಜ್ವರದ ಪ್ರಕರಣಗಳು ವರದಿಯಾಗಿದ್ದರೂ, ಆರೋಗ್ಯ ಇಲಾಖೆಯ ಸಂದರ್ಭೋಚಿತ ಕ್ರಮಗಳಿಂದ ಆಗಸ್ಟ್ ತಿಂಗಳ ವೇಳೆಗೆ ಇದು 8 ಆಗಿ ಕುಂಠಿತಗೊಂಡಿತ್ತು ಎಂದು ಬ್ಲೋಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರ್ರಫ್ ತಿಳಿಸಿದರು. ಕುಂಬಳೆ, ಪುತ್ತಿಗೆ, ಮಧೂರು, ಬದಿಯಡ್ಕ, ಪೆರ್ಲ, ಕುಂಬಡಾಜೆ, ಬೆಳ್ಳೂರು ಸಹಿತ ಗ್ರಾಮಪಂಚಾಯತ್ ಗಳಲ್ಲಿ ಸೊಳ್ಳೆ ಸಂತಾನೋತ್ಪತ್ತಿ ಕೇಂದ್ರಗಳ ಪತ್ತೆ ಮಾಡಿ ನಾಶಪಡಿಸುವ ಚಟುವಟಿಕೆಗಳು ಚುರುಕಾಗಿವೆ.
ಕುಂಬಳೆಯಲ್ಲಿ ನಡೆದ ಸೊಳ್ಳೆ ನಿವಾರಣೆ ದಿನವನ್ನು ಕುಂಬಳೆ ಸಿ.ಎಚ್.ಸಿ.ಯ ವೈದ್ಯಾಧಿಕಾರಿ ಡಾ.ಕೆ.ದಿವಾಕರ ಉದ್ಘಾಟಿಸಿದರು. ಬ್ಲೋಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಲೆಪ್ರಸಿ ಆಫೀಸರ್ ಮೋಹನನ್ ಪಿಳ್ಳೆ, ಆರೋಗ್ಯ ಇನ್ಸ್ ಪೆಕ್ಟರ್ ಕುರಿಯಾಕೋಸ್ ಈಪ್ಪನ್, ಕಿರಿಯ ಹೆಲ್ತ್ ಇನ್ಸ್ ಪೆಕ್ಟರ್ ಗಳಾದ ಕೆ.ಕೆ.ಆದರ್ಶ್, ಪಿ.ವಿ.ವೇಕ್, ಜೆ.ಪಿ.ಎಚ್.ಎನ್.ಎಸ್.ಶಾರದಾ, ವಿಲ್ ಫ್ರೆಡ್ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ ಮಾಹಿತಿ: ವಿಶ್ವ ಸೊಳ್ಳೆ ನಿವಾರಣೆ ದಿನಾಚರಣೆ ಅಂಗವಾಗಿ ಕುಂಬಳೆ ಕುಂಟಂಗೇರಡ್ಕ ಮಧುರನಗರದಲ್ಲಿರುವ ನೀರು ನಿಂತ ಜಾಗಕ್ಕೆ ಗಪ್ಪಿ ಮೀನು ಹೂಡಿಕೆ ನಡೆಸುತ್ತಿರುವುದು.


