ಕುಂಬಳೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕಾಸರಗೋಡು ಜಿಲ್ಲಾ ಘಟಕಕ್ಕೆ ಅಂಗೀಕಾರ ನೀಡಿ ಸದಸ್ಯರಿಗೆ ಕೊಡಮಾಡಿದ ಗುರುತು ಚೀಟಿಗಳ ವಿತರಣಾ ಕಾರ್ಯಕ್ರಮ ಮಂಗಳವಾರ ಬೆಳಿಗ್ಗೆ ಕುಂಬಳೆಯ ಮಾಧವ ಪೈ ಸಭಾಂಗಣದಲ್ಲಿ ನಡೆಯಿತು.
ಗುರುತು ಚೀಟಿ ವಿತರಣೆಯನ್ನು ಉದ್ಘಾಟಿಸಿದ ಕೇರಳ ಗ್ರಾಮೀಣ ಬ್ಯಾಂಕ್ ನಿವೃತ್ತ ವಲಯ ಪ್ರಬಂಧಕ ಎಸ್.ಜಗನ್ನಾಥ ಶೆಟ್ಟಿ ಅವರು ಮಾತನಾಡಿ, ಜಗತ್ತಿನಾದ್ಯಂತ ಘಟಿಸಿದ ಪ್ರತಿಯೊಂದು ಆಂದೋಲನಗಳ ಹಿಂದೆ ಪತ್ರಿಕಾ ಮಾಧ್ಯಮ ಕ್ಷೇತ್ರದ ಕೊಡುಗೆ ಮಹತ್ತರವಾದುದು. ಇಂದೀಗ ಪತ್ರಕರ್ತರೇ ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿ ಆಂದೋಲನಕ್ಕಿಳಿಯಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ದುರ್ದೈವ. ಮಾಧಯಮ ಕ್ಷೇತ್ರದ ಏಳು ಬೀಳುಗಳಲ್ಲಿ ಹೈರಾಟಗೊಳ್ಳುವ ಪತ್ರಕರ್ತರ ಸಂಕಷ್ಟಗಳಿಗೆ ಧ್ವನಿಯಾಗಿ ಪತ್ರಕರ್ತರ ಸಂಘ ಬೆಳೆದುಬರಲಿ ಎಂದು ತಿಳಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಅಚ್ಚುತ ಚೇವಾರ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಗಡಿನಾಡು ಕಾಸರಗೋಡಿನ ಕನ್ನಡ ಪತ್ರಕರ್ತರ ಬವಣೆ ಶೋಚನೀಯವಾದುದು. ಅನೇಕ ವರ್ಷಗಳ ನಿರಂತರ ಶ್ರಮದ ಫಲವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ನಮಗೆ ನೀಡಿರುವ ಅಂಗೀಕಾರ ಇನ್ನಷ್ಟು ಕ್ರಿಯಾಶೀಲತೆಗೆ ದಾರಿಮಾಡಿಕೊಟ್ಟಿದೆ. ಸಂಘಟನೆಯನ್ನು ಬಲಪಡಿಸುವಲ್ಲಿ ಪ್ರತಿಯೊಬ್ಬ ಸದಸ್ಯರ ಬೆಂಬಲ ಗಟ್ಟಿಗೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತರಾದ ಭಾಸ್ಕರ ಕೆ., ಎ.ಆರ್.ಸುಬ್ಬಯ್ಯಕಟ್ಟೆ, ರವಿ ನಾಯ್ಕಾಪು, ಜಯಾನಂದ ಕುಮಾರ್ ಹೊಸದುರ್ಗ ಮೊದಲಾದವರು ಮಾತನಾಡಿದರು. ಜಿಲ್ಲಾ ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ಅಧಿಕಾರಿ ವಿ.ಜಿ.ಕಾಸರಗೋಡು ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಕರೊನಾ ಸೋಂಕು ಬಾಧೆಗೊಳಗಾಗಿ ನಿಧನರಾದ ಪತ್ರಕರ್ತರಿಗೆ ಮೌನ ಪ್ರಾರ್ಥನೆಯ ಮೂಲಕ ನಮನ ಸಲ್ಲಿಸಲಾಯಿತು. ಜೊತೆಗೆ ಮೃತರಾದ ಪತ್ರಕರ್ತರ ಕುಟುಂಬಗಳಿಗೆ ನೆರವು ನೀಡಿದ ಕರ್ನಾಟಕ ಸರ್ಕಾರವನ್ನು ಅಭಿನಂದಿಸಲಾಯಿತು.
ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೆಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಪುರುಷೋತ್ತಮ ಭಟ್ ಕೆ.ವಂದಿಸಿದರು. ಖಜಾಂಜಿ ಪುರುಷೋತ್ತಮ ಪೆರ್ಲ ನಿರ್ವಹಿಸಿದರು.



