ಮಂಜೇಶ್ವರ: ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ ಮೀಂಜ ಪಂಚಾಯತಿಗೊಳಪಟ್ಟ ಇಪ್ಪತೊಂದು ಮಂದಿ ಕರಸೇವಕರಿಗೆ ಅಭಿನಂದನೆ , ಶ್ರೀರಾಮ ಸಂಕೀರ್ತನೆ, ಹಾಗೂ ಇತ್ತೀಚೆಗೆ ನಡೆದ ಚಿಗುರುಪಾದೆ ಮಹಾಲಿಂಗೆಶ್ವರ ದೇವಸ್ಥಾನ ದರೋಡೆ ಪ್ರಕರಣದ ಖಂಡನಾ ಸಭೆ ಇತ್ತೀಚೆಗೆ ದೇವಸ್ಥಾನ ವಠಾರದಲ್ಲಿ ಜರಗಿತು.
ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಘಟಕಗಳ ಸಂಯುಕ್ತ ಕೂಡುವಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ವಿಶ್ವಹಿಂದು ಪರಿಷತ್ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರಾ.ಸ್ವ.ಸೇ.ಸಂ.ದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸೇವಾ ಪ್ರಮುಖ ಸುಬ್ರಾಯ ನಂದೋಡಿ ಮುಖ್ಯ ಬಾಷಣಕಾರರಾಗಿ ಭಾಗವಿಹಿಸಿ ಮಾತನಾಡಿ ಶ್ರೀರಾಮನ ಬದುಕು ನಮಗೆಲ್ಲ ಸದಾ ಆದರ್ಶ, ಆತನ ನ್ಯಾಯ ನಿಷ್ಟುರತೆ, ಕರ್ತವ್ಯ ಬದ್ದತೆ, ಮಿತಭಾಷಿತನ ನಾವು ಬದುಕಲ್ಲಿ ಅಳವಡಿಸಿ ಕೊಳ್ಳಬೇಕಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಕಟ್ಟುವಲ್ಲಿ ಕರಸೇವಕರ ತ್ಯಾಗ ಬಲಿದಾನ ಮರೆಯುವಂತಿಲ್ಲ ಅವರ ತ್ಯಾಗ ಬಲಿದಾನಗಳಿಗೆ ಇಂದು ನ್ಯಾಯ ದೊರಕಿದ್ದು ಭವ್ಯ ರಾಮಮಂದಿರದ ಶಿಲಾನ್ಯಾಸ ನೆರವೇರಿದೆ ಹಾಗೂ ಭವ್ಯ ಮಂದಿರ ನಮ್ಮ ಕಾಲದಲ್ಲೇ ತಲೆಯೆತ್ತಿ ನಿಲ್ಲಲಿದೆ ಎಂಬುದು ನಮಗೆಲ್ಲಾ ಧನ್ಯತೆಯ ಭಾವ ಮೂಡಿಸಿದೆ ಎಂದರು. ಹಿಂದೂ ಶ್ರದ್ದಾಕೇಂದ್ರಗಳ ಮೇಲೆ ನಡೆಯುತ್ತಿರುವ ಕಳ್ಳತನ, ದರೋಡೆ, ಅಪವಿತ್ರ ಗೊಳಿಸುವಿಕೆ ಖಂಡನಾರ್ಹವಾಗಿದ್ದು ಸಮಾಜ ಒಂದಾಗಿ ಇದಿರಿಸ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ವಿಶ್ವಹಿಂದು ಪರಿಷತ್ ಕಾರ್ಯದರ್ಶಿ ಉಳುವಾನ ಶಂಕರ ಭಟ್, ಮಂಜೇಶ್ವರ ಪ್ರಖಂಡ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಸುರೇಶ್ ಶೆಟ್ಟಿ ಪರಂಕಿಲ, ಚಿಗುರುಪಾದೆ ದೇವಸ್ಥಾನದ ಆಡಳಿತ ಮುಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ವಿಶ್ವಹಿಂದೂ ಪರಿಷತ್ ಮುಖಂಡರಾದ ಯಾದವ ಕೀರ್ತೇಶ್ವರ, ಶೈಲೇಶ್ ಅಂಜರೆ, ತಾರಾನಾಥ್, ಸಂಕಪ್ಪ ಭಂಡಾರಿ, ಲೋಹಿತ್ ಹೊಸಂಗಡಿ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವಹಿಂದೂ ಪರಿಷತ್ ಮೀಂಜ ಖಂಡಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಹರೀಶ್ ಮೀಯಪದವು ನಿರೂಪಿಸಿದ ಸಮಾರಂಭದಲ್ಲಿ ಅರವಿಂದಾಕ್ಷ ಭಂಡಾರಿ ವಂದಿಸಿದರು. ರಾಜಾರಾಮ ರಾವ್ ಮೀಯಪದವು ಕರಸೇವಕರ ಸನ್ಮಾನಪತ್ರ ವಾಚಿಸಿ ಕರಸೇವಕರ ಸೇವೆಯ ಪ್ರಸ್ತುತತೆಯನ್ನು ವಿವರಿಸಿದರು. ವಸಂತ ಭಟ್ ತೊಟ್ಟೆತ್ತೋಡಿ ಶ್ರೀರಾಮ ಕೀರ್ತನೆಯನ್ನು ಹಾಡಿದರು. ಯಾದವ್ ಕೀರ್ತೇಶ್ವರ ಶ್ರೀರಾಮ ತಾರಕಮಂತ್ರ ಪಠಣ ನಿರ್ವಹಿಸಿದರು.
ಇತ್ತೀಚೆಗೆ ನಿಧನರಾದ ಮಹಾಲಿಂಗೇಶ್ವರ ದೇವಸ್ಥಾನದ ಮಾರ್ಗದರ್ಶಕ ಬ್ರಹ್ಮಶ್ರೀ ಗೋವಿಂದ ಭಟ್ ಪೊಳ್ಳಕಜೆ, ಮೊಕ್ತೇಸರ ನಾರಾಯಣ ಭಟ್ ಶಿರಸಿ, ಉಪಾಧ್ಯಕ್ಷ ನಾರಾಯಣ ಶೆಟ್ಟಿ ಬೊಳ್ಳಾರು, ದೇವಸ್ಥಾನದ ಭಕ್ತರಾದ ಶಿವರಾಮ ಭಂಡಾರಿ ಪಳ್ಳತ್ತಡ್ಕ , ಕಾಂತಪ್ಪ ಶೆಟ್ಟಿ ಕೊಂಕೋಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಳಿಕ ಮೀಂಜ ಪಂಚಾಯತಿ ವಿಶ್ವಹಿಂದೂ ಪರಿಷತ್ ಹಾಗೂ ಮಾತೃ ಶಕ್ತಿ ದುರ್ಗಾವಾಹಿನಿ ಪದಾಧಿಕಾರಿಗಳನ್ನು ಘೋಷಿಸಲಾಯಿತು.


