ಮಂಜೇಶ್ವರ/ಪೆರ್ಲ: ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ದೇಶವಿದ್ದರೂ ಕೇರಳ ಸರ್ಕಾರ ಅದರ ವಿರುದ್ಧವಾಗಿ ಕರ್ನಾಟಕಕ್ಕೆ ಹೋಗಲು ಪಾಸ್ ಮೂಲಕ ನಿಯಂತ್ರಣ ಮಾಡುವ ಕ್ರಮದ ವಿರುದ್ಧ ಬಿಜೆಪಿ ಮಂಗಳವಾರ ಗಡಿಗಳಲ್ಲಿ ಪಾಸ್ ಉಲ್ಲಂಘನಾ ಆಂದೋಲನ ಆರಂಭಿಸಿತು.
ಅನಗತ್ಯ ಪಾಸು ಮತ್ತು ನಿಯಂತ್ರಣ ಹೇರುವುದರಿಂದ ನೂರಾರು ಮಂದಿ ತಮ್ಮ ಉದ್ಯೋಗ ಮತ್ತು ವ್ಯಾಪಾರ ನಡೆಸಲಾಗದೆ ಕಷ್ಟಪಡುತ್ತಿದ್ದಾರೆ. ಆದರೂ ಕರ್ನಾಟಕಕ್ಕೆ ಮುಕ್ತ ಪ್ರವೇಶ ನಿಷೇಧಿಸಿರುವ ಕೇರಳ ರಾಜ್ಯ ಸರ್ಕಾರದ ನಿಲುವು ರಾಜಕೀಯ ಪ್ರೇರಿತವಾಗಿದ್ದು ಗಡಿನಾಡುಗಳ ಜನಸಾಮಾನ್ಯರ ಹಕ್ಕುಗಳನ್ನು ಸ್ವತಃ ಸರ್ಕಾರವೇ ಕಸಿದುಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಅನ್ಯಾಯದ ವಿರುದ್ಧ ಉಗ್ರ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ. ಜನಸಾಮಾನ್ಯರ ಕನಿಷ್ಠ ಹಕ್ಕನ್ನು ಕಸಿಯಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ. ಅಂತಹ ಕೋವಿಡ್ ತುರ್ತು ಇಂದೀಗ ಇಲ್ಲ ಎಮದು ಅವರು ತರಾಟೆಗೆ ತೆಗೆದುಕೊಂಡರು.
ಮಂಡಲಾಧ್ಯಕ್ಷ ಮಣಿಕಂಠ ರೈ ಪಟ್ಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸುಧಾಮ ಗೋಸಾಡ, ಪದ್ಮನಾಭ ಕಡಪ್ಪರ, ಯಾದವ ಬಡಾಜೆ, ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮೇಲ್ಪಟ್ಟು ನೇತಾರರ ಸಭೆ ಇಂತಹ ಪ್ರತಿಭಟನೆಯ ನಿರ್ಣಯ ಕೈಗೊಂಡು ಜಿಲ್ಲೆಯ ವಿವಿಧ ಗಡಿಗಳಲ್ಲಿ ಕೇರಳ ಸರ್ಕಾರ ಅನ್ಯಾಯವಾಗಿ ಈಗಲೂ ಮುಂದುವರಿಸಿರುವ ವಿವಿಧ ತಡೆಗಳನ್ನು ದಾಟಿ ಪ್ರತಿಭಟನೆ ನಡೆಸಿತು.
ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಅಡ್ಕಸ್ಥಳ ಗಡಿಯಲ್ಲಿ ನಡೆದ ಪ್ರತಿಭಟನೆಯನ್ನು ಬಿಜೆಪಿ ಉತ್ತರ ವಲಯಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಉದ್ಘಾಟಿಸಿದರು. ಮುಖಂಡರಾದ ರೂಪವಾಣಿ ಆರ್.ಭಟ್, ಉದಯ ಚೆಟ್ಟಿಯಾರ್, ನಾರಾಯಣ ನಾಯ್ಕ್ ಅಡ್ಕಸ್ಥಳ, ಸತೀಶ ಕುಲಾಲ್ ನಲ್ಕ, ಶಾಮಲಾ ಪತ್ತಡ್ಕ, ಮಲ್ಲಿಕಾ ಜೆ.ರೈ, ಸವಿತಾ ಮೊದಲಾದವರು ನೇತೃತ್ವ ವಹಿಸಿದ್ದರು.
ಕೋವಿಡ್ ಮಾನದಂಡಗಳನ್ನು ಪಾಲಿಸಿ ನಡೆದ ಪ್ರತಿಭಟನೆಯಲ್ಲಿ ನೇತಾರರು ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.


