HEALTH TIPS

ಮೇರು ವಿದ್ವಾಂಸ ಮೂಡಂಬೈಲು ಶಾಸ್ತ್ರಿಗಳಿಗೆ ವನಜಾರಂಗಮನೆ ಪ್ರಶಸ್ತಿಯ ಮೆರುಗು...

      ಈ ಸಾಲಿನ ವನಜಾ ರಂಗಮನೆ ಪ್ರಶಸ್ತಿಗೆ ನಾಡಿನ  ವಿದ್ವಾಂಸ ಪರಂಪರೆಯ ಹಿರಿಯರಾದ ಮೇರು ಅರ್ಥಧಾರಿ, ಗ್ರಂಥಕರ್ತ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಆಯ್ಕೆಗೊಂಡಿದ್ದಾರೆ. 

      ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆಯಲ್ಲಿ ವಾಸವಿರುವ ಸಾಧಕರ ಮನೆಯಂಗಳದಲ್ಲಿ ಆಗಸ್ಟ್ 28ರಂದು ಸಂಜೆ 3ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಸರಳವಾಗಿ ನಡೆಯಲಿದೆ. 

    ತೆಂಕುತಿಟ್ಟಿನ ಹಿರಿಯ ಹಾಸ್ಯಗಾರ ಸುಜನಾ ಸುಳ್ಯರ ಧರ್ಮಪತ್ನಿ ದಿ. ವನಜಾಕ್ಷಿ ಅವರ ಸ್ಮರಣೆಯೊಂದಿಗೆ ಪುತ್ರ, ನಾಡಿನ ಪ್ರಸಿದ್ದ ರಂಗಕರ್ಮಿ ಜೀವನ್ ರಾಂ ಸುಳ್ಯ ತಮ್ಮ ಸುಳ್ಯದ ರಂಗಮನೆಯ ಮೂಲಕ ವರ್ಷಂಪ್ರತಿ ಈ ಪ್ರಶಸ್ತಿ ನೀಡುತ್ತಿದ್ದಾರೆ. ಮೂಲತಃ ಅಡ್ಯನಡ್ಕದವರಾದ ಸಾಧಕರ ಕುರಿತೊಂದು ಆತ್ಮೀಯ ಬರಹ ಇಲ್ಲಿದೆ.

        

      ಕರಾವಳಿ ಕರ್ನಾಟಕದ ಪಂಡಿತ ಪರಂಪರೆಯಲ್ಲಿ ವರ್ತಮಾನದ ಮೇರುಮುತ್ಸದ್ದಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳವರಿಗೆ ಈಗ 84ರ ಹರೆಯ. ತನ್ನ ಬದುಕನ್ನಿಡೀ ಸುಸಂಸ್ಕøತ ಶಾಸ್ತ್ರಾಧ್ಯಯನ ಮತ್ತು ಪಾಂಡಿತ್ಯಕ್ಕಾಗಿಯೇ ವಿನಿಯೋಗಿಸಿದ ಈ ಸಾರಸ್ವತ ಸಾಧಕನಿಗೀಗ ಪ್ರತಿಷ್ಠಿತ ವನಜಾರಂಗಮನೆ ಪ್ರಶಸ್ತಿಯ ಮೆರುಗು. ಶಾಸ್ತ್ರಿಗಳದ್ದು  ಬಹುಮುಖೀ ಜೀವನಾಸಕ್ತಿ. ಅವರೊಬ್ಬ ಸುಸಂಸ್ಕøತ ಸಮಾಜವಿಜ್ಞಾನ ಅಧ್ಯಾಪಕ, ನಿರಂತರ ಜ್ಞಾನಶಾಖೆಗಳ ಶೋಧಕ. ಪೌರಾಣಿಕ ಶ್ರೇಷ್ಠತೆಯ ಉದಾತ್ತ ಮಾದರಿಗಳ ಅನುವಾದಕ. ಕನ್ನಡದ ಕೋಶ ಕ್ಷೇತ್ರಕ್ಕೆ ಮಹದ್ಗ್ರಂಥಗಳನ್ನು ಕಾಣಿಕೆಯಿತ್ತ ಮಹಾವಿದ್ವಾಂಸ. ತಾಳಮದ್ದಳೆಯಲ್ಲಿ ತಲೆಮಾರೊಂದನ್ನು ಅನುಸರಿಸುವಂತೆ ತಲೆದೂಗಿಸಿದ ಸ್ಫಟಿಕಶುದ್ಧ ಅರ್ಥಧಾರಿ... 

        ಅವರದ್ದು ತಾರ್ಕಿಕ ಅರ್ಥ. ಪುರಾಣಗ್ರಂಥ ಖಚಿತ ಆಧಾರದಲ್ಲಿ ಶೋಭಿಸುವ, ತರ್ಕಕ್ಕೆ ಎಡೆಇಲ್ಲದ ಶುಭ್ರ ವಾಗ್ಝರಿ.       ತನ್ನನ್ನು ರೂಪಿಸಿದ ಗುರು ವಿದ್ವಾನ್ ಪೆರ್ಲ ಪಂಡಿತರು ಮತ್ತು ಅನಂತರ ಶೇಣಿ, ಸಾಮಗ, ಕಾಂತರೈ, ತೆಕ್ಕಟ್ಟೆ ಮೊದಲಾದವರೊಂದಿಗೆ ಗುದ್ದಾಡಿ ಮೊನೆಗೊಂಡ ಮಾತಿನ ಶೂರ. ಅವರ ಅರ್ಥ ವಾಚಿಕದಲ್ಲಿ ಪೌರಾಣಿಕ ಗ್ರಂಥಾಧ್ಯಯನಗಳ ತೂಕವಿದೆ. ಅಕಾಡೆಮಿಕ್ ಮೌಲ್ಯದ ಶೋಭೆ ಇದೆ. ತರ್ಕದ ವೈಚಾರಿಕ ಚಿಂತನೆಗೆ ಔದ್ಯೋಗಿಕ, ಅಧಿಕೃತತೆಯ ಮೊಹರು ಇದೆ. ವರ್ತಮಾನದಲ್ಲಿ ಮೂಡಂಬೈಲು ಶಾಸ್ತ್ರಿಗಳು ಕಳೆದ ಕಾಲದ ಪಂಡಿತ ಪರಂಪರೆಯ ಅರ್ಥಗಾರಿಕೆಯ ಕೊನೆಯ ಕೊಂಡಿ. ಸಮಕಾಲೀನ ಹಿರಿಯ ಅರ್ಥಧಾರಿಗಳಿರಲಿ, ಕಿರಿಯರೇ ಇರಲಿ ಸಮಸ್ಯೆ, ಸವಾಲು ಎದುರಾದರೆ ಮೊರೆಯಾಗುವುದು ಶಾಸ್ತ್ರಿಗಳಲ್ಲೇ..!

          ವ್ಯಾಪಕವಾದ ಓದು, ಅಧ್ಯಯನಗಳ ತಲ್ಲೀನತೆ ಮತ್ತು ಪೂರ್ವಸಿದ್ಧತೆಗಳು ಅವರನ್ನು ರೂಪಿಸಿದೆ. ಇದವರಿಗೆ ಬಾಲ್ಯದಿಂದಲೇ ಬಂದ ಸಂಸ್ಕಾರ. ಅವರದ್ದು ಶಾಸ್ತ್ರಾಧ್ಯಯನ, ಪಾಂಡಿತ್ಯಾರಾಧನೆಗೆ ಹೆಸರಾದ ಅಡ್ಯನಡ್ಕ ಸಮೀಪದ ಚಕ್ರಕೋಡಿ ಮನೆತನ. ಅರ್ಥವಾಙ್ಮಯ ಮತ್ತು ಗ್ರಂಥರಚನೆಯಲ್ಲವರದ್ದು ಗಜಮುದ್ರೆ. ತಾಳಮದ್ದಳೆಯಲ್ಲವರು ವಿಶೇಷವಾಗಿ ಶೋಭಿಸಿದ್ದಾರೆ. ಸ್ತ್ರೀತ್ವಕ್ಕೆ ಧ್ವನಿಯಾಗಿದ್ದಾರೆ. ಮಹಿಳಾ ಸಂವೇದನೆಗಳನ್ನು ಅರ್ಥದಲ್ಲಿ ಕಡೆದಿಟ್ಟು ನಿರ್ಲಕ್ಷಿತ ಪಾತ್ರಗಳ ಸಂವಾದ ವಿಸ್ತರಿಸಿದ್ದಾರೆ, ಕಥನದ ಮೂಲಾಶಯಕ್ಕೆ ಪೆಟ್ಟಾಗದಂತೆ ಕಲಾತ್ಮಕ ಕಾವ್ಯಾವರಣ ನೀಡಿದ್ದಾರೆ. ತಾನು ಪ್ರಚಾರಗೊಂಡು ಶೋಭಿಸುವುದಕ್ಕಿಂತ ತನ್ನ ಪಾತ್ರ, ಕೃತಿಗಳು ಮೆರೆಯಬೇಕೆಂದು ಸದಾ ಅಧ್ಯಯನ ನಿರಂತರತೆಯಲ್ಲೇ ಮಗ್ನನಾಗಿರುವ ಮೂಡಂಬೈಲು ಶಾಸ್ತ್ರಿಗಳು ಈ ಇಳಿಹರೆಯದಲ್ಲೂ ವಿಶ್ರಾಂತಿ ಇಲ್ಲದೇ ಪೌರಾಣಿಕ ಜಿಜ್ಞಾಸೆಗಳ ಶೋಧದಲ್ಲಿದ್ದಾರೆ. ಮಾಹಿತಿ ಅರಸಿ ಬಂದ ಕಿರಿಯರಿಗೆ ಮಾರ್ಗದರ್ಶಕರಾಗಿ ಒದಗುತ್ತಾರೆ. sಸೌಜನ್ಯ ಮತ್ತು ಸಂಸ್ಕಾರಯುತ ನಡೆನುಡಿಗೆ ಅವರು ಮತ್ತೊಂದು ಹೆಸರು.

            ಕನ್ನಡಕ್ಕೆ ವಾಲ್ಮೀಕಿ ರಾಮಾಯಣ ಕೋಶ, ಮಹಾಭಾರತ ಕೋಶ, ಶ್ರೀಮದ್ಭಾಗವತ ಕೋಶ, ಒದಗಿಸಿರುವುದು ಇವರ ಮಹತ್ಸಾಧನೆ ಮತ್ತು ವಿದ್ವತ್ತಿಗೆ ಪ್ರತೀಕ. ಉಳಿದಂತೆ 14ರಷ್ಟು ಪೌರಾಣಿಕ ನಾಟಕ, ದಶಾವತಾರದ ವಿಶ್ಲೇಷಣಾ ಉಪನ್ಯಾಸಗಳು ಮೊದಲಾದ ಅಮೂಲ್ಯ ಕೃತಿಗಳನ್ನಿತ್ತಿದ್ದಾರೆ. ಅರ್ಥಗಾರಿಕೆಯ ಧ್ವನಿತಟ್ಟೆ ಸಂಗ್ರಹಗಳಿದ್ದಲ್ಲಿ ಅದು ಮತ್ತಷ್ಟು ಮಹದ್ಗ್ರಂಥಕ್ಕೆ ಸಮಾನ. ಈ ಸಾಧನೆಗೆ ಮನ್ನಣೆಯಾಗಿ ಕರ್ನಾಟಕ ಯಕ್ಷಗಾನ ಜಾನಪದ ಅಕಾಡೆಮಿ ಪ್ರಶಸ್ತಿ ಸಹಿತ ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಅಲಂಕರಿಸಿದ ಇವರಿಗೀಗ ವನಜಾರಂಗಮನೆ ಪ್ರಶಸ್ತಿಯ ಗೌರವ.

                 ವನಜಾ ರಂಗಮನೆ ಪ್ರಶಸ್ತಿ ಎಂದರೆ..?

    ಸುಳ್ಯದ ರಂಗಮನೆ ಕರಾವಳಿ ಕರ್ನಾಟಕದ ನಿರಂತರ ಚಲನಶೀಲ, ಸೃಜನಶೀಲ ರಂಗಚಟುವಟುಕೆಗಳ ಶ್ರೀಧಾಮ. ಇದು ರಂಗಕರ್ಮಿ ಜೀವನ್ ರಾಂ ಅವರ ಕನಸಿನ ಮನೆ. ತೆಂಕುತಿಟ್ಟಿನಲ್ಲಿ 36ವರ್ಷ ಹಾಸ್ಯಗಾರರಾಗಿ ಒಂದು ತಲೆಮಾರನ್ನಿಡೀ ಸೃಜನಶೀಲ ಹಾಸ್ಯದಿಂದ ಆರೋಗ್ಯವಂತರನ್ನಾಗಿಸಿದ ಸುಜನಾಸುಳ್ಯ ಇಲ್ಲಿದ್ದಾರೆ. ಅವರು ಜೀವನ್ ರಾಂ ಅವರ ತಂದೆ. ಈ ಇಬ್ಬರು ಕಲಾವಿದರ ಬದುಕನ್ನು ಅರಳಿಸಿದ, ಮಾಗಿಸಿದ ವನಿತೆಯೇ ವಜನಾಕ್ಷಿ. ಅವರು ರಂಗಮನೆಗೆ ಬಂದವರೆಲ್ಲರ ಅಮ್ಮ...

ಅವರು ಕಲಾವಿದೆಯಲ್ಲ, ಆದರೆ ಕಲಾಹೃದಯಿ. ರಂಗಮನೆಯಲ್ಲರಳಿದ ಕಲಾವಿದರೆಲ್ಲರಿಗೆ ಅನ್ನಪೂರ್ಣೆಯಾಗಿದ್ದ ಮಮತಾಮಯಿ ಆಯಿ. ಈ ಅಮ್ಮ ಅಕಾಲದಲ್ಲಿ ಅಗಲಿ ಈಗ 8ವರ್ಷ. ಅವರ ನೆನಪಲ್ಲಿ ನೀಡುವುದೇ ವನಜಾ ರಂಗಮನೆ ಪ್ರಶಸ್ತಿ. 10ಸಾವಿರ ನಗದು, ರಂಗಮನೆಯ ಪ್ರಶಸ್ತಿ ಪತ್ರ, ಸ್ಮರಣಿಕೆ ಶಿಲ್ಪವನ್ನೊಳಗೊಂಡ ಈ ಪ್ರಶಸ್ತಿಯ ಮೂಲಕ ಪ್ರತೀ ವರ್ಷವೂ ವನಜಮ್ಮ ನಾಡಿನುದ್ದಗಲ ಮತ್ತೆ,ಮತ್ತೆ ನೆನಪಾಗುತ್ತಾರೆ.


ಲೇಖಕರ ವಿಳಾಸ: ಎಂ.ನಾ. ಚಂಬಲ್ತಿಮಾರ್

ನಾಯಕ್ಸ್ ಜಂಕ್ಷನ್, ಕಂಚಿಕಟ್ಟೆ ರಸ್ತೆ. ಕುಂಬಳೆ-ಕಾಸರಗೋಡು. - 671321

ಮೊ: 09895508277





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries