ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲ ವೃದ್ಧಾಶ್ರಮಗಳಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್ ತಪಾಸಣೆ ನಡೆಸಿದರು. ಈ ವೇಳೆ ಯಾರಿಗೂ ರೋಗಬಾಧೆಯಿಲ್ಲ ಎಂಬುದು ಪತ್ತೆಯಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಜಿಲ್ಲೆಯ ಒಟ್ಟು 20 ವೃದ್ಧಾಶ್ರಮಗಳಲ್ಲಿ ಇಲ್ಲಿನ ನಿವಾಸಿಗಳು ಮತ್ತು ಸಿಬ್ಬಂದಿಗಳಾದ 927 ಮಂದಿಯನ್ನು ಆಂಟಿಜೆನ್ ತಪಾಸಣೆಗೆ ಒಳಪಡಿಸಲಾಗಿದೆ. ಹಿರಿಯ ಪ್ರಜೆಗಳಿಗೆ ಮತ್ತು ವೃದ್ಧಾಶ್ರಮಗಳಲ್ಲಿ ವಿಶೇಷ ನಿಗಾ ಮತ್ತು ತಪಾಸಣೆ ನಡೆಸಬೇಕು ಎಂಬ ರಾಜ್ಯ ಸರಕಾರದ ಆದೇಶ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ. 21 ದಿನಗಳ ನಂತರ ಮತ್ತೆ ಈ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗುವುದು, ವೃದ್ಧಾಶ್ರಮಗಳಿಗಾಗಿ ಪ್ರತ್ಯೇಕ ಟೆಲಿ ಮೆಡಿಸಿನ್ ಸೌಲಭ್ಯ ಆರಂಭಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.


