ಕಾಸರಗೋಡು: ನೀಲೇಶ್ವರ ತಾಲೂಕು ಆಸ್ಪತ್ರೆಯ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ.
ಸೆ.28ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರಂಭದಲ್ಲಿ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಉದ್ಘಾಟನೆ ನಡೆಸುವರು.
ಸಂಸದರಾಗಿದ್ದ ಪಿ.ಕರುಣಾಕರನ್ ಅವರ ವಿಶೇಷ ಮುತುವರ್ಜಿಯಿಂದ ಎಂಡೋಸಲ್ಪಾನ್ ಪ್ಯಾಕೇಜ್ ನಲ್ಲಿ ಅಳವಡಿಸಿ ನಬಾರ್ಡ್ ನ ಆರ್ಥಿಕ ಸಹಾಯದೊಂದಿಗೆ 2.13 ಕೋಟಿ ರೂ. ವೆಚ್ಚದಲ್ಲಿ ಎರಡು ಅಂತಸ್ತಿನ ಈ ಕಟ್ಟಡ ನಿರ್ಮಾಣಗೊಂಡಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ವಿದ್ಯುತ್ ಸೌಲಭ್ಯಕ್ಕಾಗಿ 20 ರೂ. ವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮಂಜೂರು ಮಾಡಿರುವುದು ಸೂಕ್ತ ಅವಧಿಯಲ್ಲೇ ಕಾಮಗಾರಿ ಪೂರ್ಣತೆಗೆ ಪೂರಕವಾಗಿತ್ತು. ಇದಲ್ಲದೆ ನೀಲೇಶ್ವರ ನಗರಸಭೆ ತನ್ನ ಸ್ವಂತ ನಿಧಿಯಿಂದ 10 ಲಕ್ಷ ರೂ. ಒದಗಿಸಿದ ಹಿನ್ನೆಲೆಯಲ್ಲಿ ನೂತನ ಕಟ್ಟಡಕ್ಕಾಗಿ ನೂತನ ಟ್ರಾನ್ಸ್ ಪಾರ್ಮರ್ ಸ್ಥಾಪಿಸಲಾಗಿದೆ. ಇಲ್ಲಿ ಡಯಾಲಿಸಿಸ್ ಚಿಕಿತ್ಸಾ ಕೇಂದ್ರ ಸ್ಥಾಪನೆಯ ಕಾತಮಗಾರಿ ಅಂತಿಮಹಂತದಲ್ಲಿದೆ. ನಗರಸಭೆಯ ಮುತುವರ್ಜಿಯಿಂದ ಫಿಝಿಯೋ ಥೆರಪಿ ಯೂನಿಟ್ ಈಗಾಗಲೇ ಆರಂಭಗೊಂಡಿದೆ.
ನೂತನ ಕಟ್ಟಡ ಉದ್ಘಾಟನೆಗೊಳ್ಳುವ ಮೂಲಕ ನೀಲೇಶ್ವರ ತಾಲೂಕು ಆಸ್ಪತ್ರೆಯಲ್ಲಿರುವ ಸ್ಪೆಷ್ಯಾಲಿಟಿ ವಿಭಾಗವಾಗಿರುವ ಶಿಶುರೋಗ, ಹೆರಿಗೆ ಶುಶ್ರೂಷೆ, ಜನರಲ್ ಮೆಡಿಸಿನ್, ದಂತಾರೋಗ್ಯ ಗಳು ,ಇನ್ನಿತರ ವಿಶೇಷ ವಿಭಾಗಗಳನ್ನು ಹೊಸ ಕಟ್ಟಡದಲ್ಲೂ ಆರಂಭಿಸುವ ಯತ್ನದಲ್ಲಿ ನೀಲೇಶ್ವರ ನಗರಸಭೆಯಿದೆ.
ಆರೋಗ್ಯ ವಲಯಕ್ಕೆ ದೊಡ್ಡ ಯೋಗದಾನ ನೀಡುತ್ತಾ ಬಂದಿರುವ ನೀಲೇಶ್ವರ ತಾಲೂಕು ಆಸ್ಪತ್ರೆ ರಾಜ್ಯ ಮಟ್ಟದಲ್ಲಿ ಸತತ ಮೂರು ಬಾರಿ ಕಾಯಕಲ್ಪಂ ಪ್ರಶಸ್ತಿ ಪಡೆಯುತ್ತಾ ಬಂದಿದೆ. 24 ತಾಸು ಚಟುವಟಿಕೆ ನಡೆಸುವ ಕ್ಯಾಷ್ಯುವೆಲ್ಟಿ ವಿಭಾಗ ಸಹಿತ ರೋಗಿ ಸೌಹಾರ್ದ ಆಸ್ಪತ್ರೆ ಎಂಬ ಜನಪರ ಅಂಗೀಕಾರವನ್ನು ಪಡೆದಿದೆ. ಇಲ್ಲಿ ಎಕ್ಸ್ ರೇ ಯೂನಿಟ್ ನಿರ್ಮಾಣ ಪೂರ್ತಿಗೊಂಡಿದೆ.




