ಎರ್ನಾಕುಳಂ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ಭೇಟಿ ಮಾಡಲು ಸಂಬಂಧಿಕರಿಗೆ ಅನುಮತಿ ಲಭ್ಯವಾಗಿದೆ. ಪತಿ, ಮಕ್ಕಳು ಮತ್ತು ತಾಯಿಗೆ ಸ್ವಪ್ನಾಳನ್ನು ಭೇಟಿಯಾಗಲು ಎನ್.ಐ.ಎ. ನ್ಯಾಯಾಲಯ ಸೋಮವಾರ ಅವಕಾಶ ನೀಡಿದೆ.
ಎರಡು ವಾರಗಳಿಗೊಮ್ಮೆ ಸ್ವಪ್ನಾಳನ್ನು ಭೇಟಿಯಾಗಬಹುದು ಮತ್ತು ಒಂದು ಗಂಟೆ ಮಾತನಾಡಬಹುದು ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಸಪ್ನಾ ಅವರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯದ ಕ್ರಮ ಕೈಗೊಂಡಿದೆ. ಸ್ವಪ್ನಾ ಅವರ ಸಂಬಂಧಿಕರು ಆದೇಶದ ಪ್ರತಿಯೊಂದಿಗೆ ತ್ರಿಶೂರ್‍ಗೆ ತೆರಳಿರುವುದಾಗಿ ತಿಳಿದುಬಂದಿದೆ.
ಎದೆನೋವಿನಿಂದಾಗಿ ಸ್ವಪ್ನಾ ಸುರೇಶ್ ಅವರನ್ನು ಮತ್ತೆ ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೊದಲು ಅವರು ಎದೆನೋವಿನಿಂದ ಆರು ದಿನಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದರು. ಅವರ ಆರೋಗ್ಯ ಸ್ಥಿತಿಯನ್ನು ತೃಪ್ತಿಕರವೆಂದು ವೈದ್ಯಕೀಯ ಮಂಡಳಿ ನಿರ್ಣಯಿಸಿದ ಬಳಿಕ ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಸ್ವಪ್ನಾ ಆಸ್ಪತ್ರೆಗೆ ಬಂದ ಅರ್ಧ ಘಂಟೆಯೊಳಗೆ ಮತ್ತೊಬ್ಬ ಆರೋಪಿ ರಮೀಜ್ ನನ್ನೂ ಹೊಟ್ಟೆ ನೋವಿನ ಕಾರಣ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಜೈಲು ಇಲಾಖೆ ವರದಿ ಕೋರಿದೆ. ಇಬ್ಬರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಲು ಮತ್ತು ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.





