ಮಂಜೇಶ್ವರ: ಕರೋನಾ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಕಾಸರಗೋಡು-ದಕ್ಷಿಣ ಕನ್ನಡ ಅಂತರ್ ರಾಜ್ಯ ಬಸ್ ಸೇವೆಗಳು ಕೊನೆಗೂ ಆರಂಭಗೊಳ್ಳುತ್ತಿದ್ದು, ಸೋಮವಾರ ವರ್ಕಾಡಿ ಗಡಿ ಗ್ರಾಮದ ಬಾಕ್ರಬೈಲು ಮೂಲಕ ಬಸ್ ಸಂಚಾರ ಆರಂಭಗೊಂಡಿತು.
ಮಂಗಳೂರು-ಮುಡಿಪು, ಬಾಕ್ರಬೈಲು, ವಿಟ್ಲಕ್ಕೆ ಕೆಲವು ಖಾಸಗೀ ಬಸ್‍ಗಳು ಸಂಚಾರ ನಡೆಸಿದೆಯೆಂದು ತಿಳಿದುಬಂದಿದೆ. ಸೋಮವಾರ ಕೆಲವು ಬಸ್ ಗಳು ಮಾತ್ರ ಸಂಚಾರ ನಡೆಸಿದ್ದು, ಜನರ ಬೇಡಿಕೆಗಳಿಗೆ ಅನುಸಾರ ಹೆಚ್ಚಿಸಲಾಗುವುದೆಂದು ಅಧಿಕೃತರು ತಿಳಿಸಿದ್ದಾರೆ.
ಕರೊನಾ ನಿಬಂಧನೆಗಳ ಕಾರಣ ಅಂತರ್ ರಾಜ್ಯ ಸಾರಿಗೆ ಸಂಪೂರ್ಣ ಮೊಟಕುಗೊಂಡು ಆರು ತಿಂಗಳೂಗಳೇ ಕಳೆದಿವೆ. ಗಡಿ ಗ್ರಾಮಗಳ ಜನರ ಸಹಿತ ಕಾಸರಗೋಡಿನ ಬಹುಸಂಖ್ಯೆಯ ಜನರು ದಕ್ಷಿಣ ಕನ್ನಡದೊಂದಿಗೆ ನೇರ ಸಂಪರ್ಕಗಳನ್ನು ಹೊಂದಿದವರಾಗಿದ್ದು ಸಂಪರ್ಕ ನಿಯಂತ್ರಣ ಭಾರೀ ಸಂಕಷ್ಟಕ್ಕೆ ಕಾರಣವಾಗಿತ್ತು. ಅನ್ ಲಾಕ್ ಮೂರು ಜಾರಿಗೆ ಬಂದರೂ ಕಾಸರಗೋಡಿನ ಗಡಿಗಳನ್ನು ಜಿಲ್ಲಾಡಳಿತ ತೆರೆಯಲು ನಿರಾಕರಿಸಿತ್ತು. ಇದರಿಂದ ರೊಚ್ಚಿಗೆದ್ದ ಜನರು, ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ತರುವಾಯ ಜಿಲ್ಲಾಡಳಿತ ಮೃದು ಧೋರಣೆ ತಳೆದು ಹಂತಹಂತವಾಗಿ ಅಂತರ್ ರಾಜ್ಯ ಬಸ್ ಸೇವೆಗೆ ಅನುಮತಿ ನೀಡುತ್ತಿದೆ.





