ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿದ ಪರಿಣಾಮ ವಿವಿಧೆಡೆಗಳು ಜಲಾವೃತ ಹಾಗು ಹಾನಿಯಾಗಿದೆ.
ಮಧೂರು ಪ್ರದೇಶದ ಕೆಲವೆಡೆ ಜಲಾವೃತವಾಗಿದ್ದು, ಜನಜೀವನಕ್ಕೆ ತೊಡಕಾಗಿದೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಜಲಾವೃತವಾಗಿದೆ. ಪಟ್ಲ ಗ್ರಾಮದ ಕೆಲವೆಡೆ ತಲೆದೋರಿದ ನೆರೆ ಹಾವಳಿಯ ಪರಿಣಾಮ 3 ಕುಟುಂಬಗಳ 16 ಮಂದಿ ಸದಸ್ಯರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ನೆರೆಯಲ್ಲಿ ಸಿಲುಕಿಕೊಂಡಿದ್ದ ಇವರನ್ನು ಅಗ್ನಿಶಾಮಕ ದಳದ ಸಹಾಯದಿಂದ ಸಂರಕ್ಷಿಸಲಾಯಿತು.
ಜಿಲ್ಲೆಯ ಮಲೆನಾಡ ಪ್ರದೇಶಗಳಲ್ಲಿ ಮಳೆಯ ಪರಿಣಾಮ ತೀವ್ರವಾಗಿದ್ದು, ಕಂದಾಯ ಸಹಿತ ವಿವಿಧ ಇಲಾಖೆಗಳ ಸಿಬ್ಬಂದಿಗಳು ಮುಂಜಾಗರೂಕ ಕ್ರಮಗಳನ್ನು ಕೈಗೊಂಡಿದ್ದಾರೆ. ವೆಳ್ಳರಿಕುಂಡ್ ತಾಲೂಕಿನ ಈ ಹಿಂದೆ ಗುಡ್ಡದಿಂದ ಮಣ್ಣು ಕುಸಿದು ಹಾನಿಯಾದ ಪ್ರದೇಶಗಳಲ್ಲಿ ಮುಂಜಾಗರೂಕ ಕ್ರಮಗಳನ್ನು ನಡೆಸಲಾಗುತ್ತಿದೆ. ಬಳಾಲ್ ಪ್ರದೇಶದ 12 ಕುಟುಂಬಗಳನ್ನು, ಮಾಲೋಂ ಪ್ರದೇಶದ ಒಂದು ಕುಟುಂಬವನ್ನು ಸುರಕ್ಷಿತ ತಾಣಗಳಿಗೆ ವರ್ಗಾಯಿಸಲಾಗಿದೆ. ಗುಡ್ಡಗಳಿಂದ ಬಂಡೆಕಲ್ಲುಗಳು ಉರುಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಳ್ಳಾರ್ ಗ್ರಾಮದ ಎರಡು ಕುಟುಂಬಗಳನ್ನು ಸ್ಥಳಾಂತರಗೊಳ್ಳಲು ಆದೇಶ ನೀಡಿರುವುದಾಗಿ ತಹಸೀಲ್ದಾರ್ ಪಿ.ಕುಂಞÂಕಣ್ಣನ್ ತಿಳಿಸಿದರು. ಕರ್ಗಲ್ಲ ಕೋರೆಗಳು ಚಟುವಟಿಕೆ ನಡೆಸುವಂತಿಲ್ಲ ಎಂದು ತಿಳಿಸಲಾಗಿದೆ.
ಚಿತ್ತಾರಿಕಲ್ ಗ್ರಾಮದ ಈಸ್ಟ್ ಏಳೇರಿ ಗ್ರಾಮ ಪಂಚಾಯತ್‍ನ 13ನೇ ವಾರ್ಡ್ ನಲ್ಲಂಬುಳದಲ್ಲಿ ಮನೆಯೊಂದರ ಮೇಲೆ ಬುಡ ಕಳಚಿ ಮರವೊಂದು ಉರುಳಿದೆ. ಮನೆಗೆ ಭಾಗಶ: ಹಾನಿಯಾಗಿದೆ.
24 ತಾಸುಗಳಲ್ಲಿ 121.64 ಮಿ.ಮೀ.ಮಳೆ : 10 ಮನೆಗಳಿಗೆ ಭಾಗಶ: ಹಾನಿ : ಕಾಸರಗೋಡು ಜಿಲ್ಲೆಯಲ್ಲಿ 24 ತಾಸುಗಳಲ್ಲಿ 121.64 ಮಿ.ಮೀ.ಮಳೆ ಸುರಿದಿದೆ. 10 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಬಿರುಸಿನ ಮಳೆಗಾಲ ಆರಂಭಗೊಂಡ ನಂತರ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 3708.02 ಮೀ.ಮಿ. ಮಳೆ ಲಭಿಸಿದೆ.
ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ದೈತ್ಯಾಕಾರದ ಮರ : ವಾಹನ ಸಂಚಾರ ಸ್ಥಗಿತ
ಮಂಜೇಶ್ವರ: ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಕಾಸರಗೋಡು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ಕರೋಡ ಎಂಬಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಭಾನುವಾರ ಬೆಳಿಗ್ಗೆ ಭಾರೀ ದೈತ್ಯಾಕಾರದ ಮರವೊಂದು ಬುಡ ಸಹಿತ ರಸ್ತೆಗೆ ಉರುಳಿ ಬಿದ್ದಿದ್ದು, ಈ ಸಂದರ್ಭ ರಸ್ತೆಯಲ್ಲಿ ಯಾವುದೇ ವಾಹನ ಹಾಗೂ ಜನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿ ಹೋಗಿದೆ. ಆದರೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಕಾರೊಂದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿರುವುದಾಗಿ ಪ್ರತ್ಯಕ್ಷ ದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಮರ ಬೀಳುವ ಸಾಧ್ಯತೆಯ ಬಗ್ಗೆ ಕಳೆದ ಒಂದು ವರ್ಷದಿ0ದ ಸಾರ್ವಜನಿಕರು ಅಧಿಕಾರಿಗಳನ್ನು ಎಚ್ಚರಿಸಿದ್ದರೂ ನಿರ್ಲಕ್ಷ್ಯ ವಹಿಸಲಾಗಿತ್ತು. ಕಾಸರಗೋಡು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತ ವಾಗುತ್ತಿದೆ.
ಮಂಜೇಶ್ವರದ ಹಲವು ಕಡೆಗಳಲ್ಲಿ ಇನ್ನೂ ಇಂತಹ ಅಪಾಯವನ್ನು ಆಹ್ವಾನಿಸುತ್ತಿರುವ ಮರಗಳಿವೆ. ಅಧಿಕಾರಿಗಳು ಇನ್ನಾದರೂ ತಲೆಕೆಡಿಸಿಕೊಳ್ಳುವರಾ ಎಂದು ಕಾದು ನೋಡಬೇಕಾಗಿದೆ.
ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬವೊಂದು ತಂತಿ ಸಮೇತ ಬಿದ್ದಿದೆ. ಸ್ಥಳದಲ್ಲಿ ಊರವರ ಸಹಕಾರದೊಂದಿಗೆ ಅಗ್ನಿಶಾಮಕದಳ, ವಿದ್ಯುತ್ ಇಲಾಖಾ ಸಿಬ್ಬಂದಿಗಳು ಹಾಗೂ ಪೆÇಲೀಸರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.





