ಕಾಸರಗೋಡು: ಶಿಕ್ಷಣ ವಲಯಕ್ಕಾಗಿ ನಡೆಸುವ ವೆಚ್ಚ ಮುಂದಿನ ಜನಾಂಗದ ಏಳಿಗೆಗೆ ಮೂಲಭಂಡವಾಳ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟಿದ್ದಾರೆ.
ಪನತ್ತಡಿ ಗ್ರಾಮ ಪಂಚಾಯತ್ ನ ಪ್ರಾಂದರ್ಕಾವ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ರಾಜ್ಯ ಸರಕಾರವು ಸಾರ್ವಜನಿಕ ಶಿಕ್ಷಣ ಯಜ್ಞ ಮೂಲಭೂತ ಸೌಲಭ್ಯ ನಿಧಿಯಿಂದ ಒಂದು ಕೊಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಮತ್ತು ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 5 ವರ್ಷದ ಅವಧಿಯಲ್ಲಿ ಕಾಞಂಗಾಡ್ ವಿಧಾಸಭೆ ವ್ಯಾಪ್ತಿಯಲ್ಲಿ ಶಾಸಕರ ನಿಧಿಯಿಂದ 10 ಕೋಟಿ ರೂ.ವನ್ನು ಶಿಕ್ಷಣ ವಲಯಕ್ಕಾಗಿ ಮಾತ್ರ ವೆಚ್ಚ ಮಾಡಲಾಗಿದೆ. ಜೊತೆಗೆ ಕಿಫ್ ಬಿ ಮುಖಾಂತರ 40 ಕೋಟಿ ರೂ.ನ ಚಟುವಟಿಕೆಗಳು ಇಲ್ಲಿ ನಡೆದಿವೆ. ಇವು ಮುಂದಿನ ಜನಾಂಗದ ಶೈಕ್ಷಣಿಕ ಉನ್ನತಿಗೆ ತಳಹದಿಯಾಗಲಿವೆ ಎಂದವರು ನುಡಿದರು.
ಪ್ಲಾಸ್ಟಿಕ್ ನಿರ್ಮೂಲನ ಕಾರ್ಯಕ್ರಮದ ಅಂಗವಾಗಿ ಪನತ್ತಡಿ ಗ್ರಾಮ ಪಂಚಾಯತ್ ವತಿಯಿಂದ ತಯಾರಿಸಲಾದ ಬಟ್ಟೆ ಚೀಲ ವಿತರಣೆಯನ್ನು ಸಚಿವ ನಡೆಸಿದರು. ಪಂಚಾಯತ್ ಅಧ್ಯಕ್ಷ ಪಿ.ಜಿ.ಮೋಹನನ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲೋಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ನಾರಾಯಣನ್, ಪದ್ಮಾವತಿ, ಪನತ್ತಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕೆ.ಹೇಮಾಂಬಿಕಾ, ಸ್ಥಾಯೀ ಸಮಿತಿ ಅಧ್ಯಕ್ಷರುಗಳು, ಸದಸ್ಯರು, ಶಾಲೆಯ ಶಿಕ್ಷಕ, ಸಿಬ್ಬಂದಿ ವೃಂದ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ಕಾರ್ಯಕಾರಿ ಇಂಜಿನಿಯರ್ ಸುನಿಲ್ ಕುಮಾರ್ ವರದಿ ವಾಚಿಸಿದರು.





