ಕಾಸರಗೋಡು: ಮಂಗಲ್ಪಾಡಿ ತಾಲೂಕು ಹೆಡ್ ಕ್ವಾರ್ಟರ್ಸ್ ಆಸ್ಪತ್ರೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಆಶ್ರಯದಲ್ಲಿ ಆರಂಭಿಸಲಾಗುವ ಡಯಾಲಿಸಿಸ್ ಸೆಂಟರ್ ಇಂದು(ಸೆ.22) ಉದ್ಘಾಟನೆಗೊಳ್ಳಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಸೆಂಟರ್ ಉದ್ಘಾಟಿಸುವರು. ಶಾಸಕ ಎಂ.ಸಿ.ಕಮರುದ್ದೀನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಕೋವಿಡ್ ಸಂಹಿತೆ ಮೂಲಕ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ತ್ರಿಸ್ತರ ಪಂಚಾಯತ್ ಗಳ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿರುವರು.
ಮಂಜೇಶ್ವರ ತಾಲೂಕಿಗೆ ಇದೊಂದು ಜನಪರ ಕೊಡುಗೆಯಾಗಿ ಪರಿಣಮಿಸಲಿದೆ.
ನಿಕಟಪೂರ್ವ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ಮಂಜೂರಾಗಿದ್ದು, ಇದನ್ನು ಬಳಸಿ ಈ ಕಟ್ಟಡ ನಿರ್ಮಿಸಲಾಗಿದೆ. ಜೊತೆಗೆ ಉಪ್ಪಳದ ಉದ್ಯಮಿ ಐಷಾ ಫೌಂಡೇಷನ್ ಅಧ್ಯಕ್ಷ, ಅಬ್ದುಲ್ ಲತೀಫ್ ಉಪ್ಪಳಗೇಟ್ ಅವರು ಕೊಡುಗೆಯಾಗಿ ನೀಡಿರುವ ಸುಮಾರು 80 ಲಕ್ಷ ರೂ. ಮೌಲ್ಯದ 10 ಡಯಾಲಿಸಿಸ್ ಯಂತ್ರಗಳನ್ನು ಇಲ್ಲಿ ಬಳಸಲಾಗುವುದು ಎಂದು ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ತಿಳಿಸಿದರು. ವಿದ್ಯುತ್ ಸಂಪರ್ಕ, ಟ್ರಾನ್ಸ್ ಫಾರ್ಮರ್ ಸ್ಥಾಪನೆ, ಜನರೇಟರ್, ಪ್ಲಂಬಿಂಗ್, ಎ.ಸಿ. ಸಹಿತ ಚಟುವಟಿಕೆಗಳಿಗೆ ಬ್ಲೋಕ್ ಪಂಚಾಯತ್ 50 ಲಕ್ಷ ರೂ. ವೆಚ್ಚ ಮಾಡಿದೆ. ಶಾಸಕರ ನಿಧಿಯಿಂದ ಆರ್.ಒ.ಘಟಕ, ಡಯಾಲಿಸಿಸ್ ಸೆಂಟರ್ ನ ಆಸನ ಸೌಲಭ್ಯ ಇತ್ಯಾದಿ ಸಿದ್ಧಗೊಂಡಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ರೋಗಿಗಳಿಗೆ ಮಂಚ, ಹಾಸುಗೆ ಸಹಿತ ಸೌಲಭ್ಯಗಳಿಗೆ 2.25 ಕೊಟಿ ರೂ.ವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮಂಜೂರು ಮಾಡಿದ್ದಾರೆ ಎಂದವರು ತಿಳಿಸಿದರು.
ಸಾಮಾನ್ಯ ರೋಗಿಯೊಬ್ಬರಿಗೆ ಇಲ್ಲಿನ ಸೌಲಭ್ಯ ಒದಗುವಂತೆ ಡಯಾಲಿಸಿಸ್ ಚಿಕಿತ್ಸೆಗಾಗಿ ತಲಾ 250 ರೂ. ಶುಲ್ಕ ಈಡುಮಾಡಲಾಗುವುದು. ಬಿ.ಪಿ.ಎಲ್, ಪರಿಶಿಷ್ಟ-ಪಂಗಡದ ಜನತೆಗೆ ಚಿಕಿತ್ಸೆ ಪೂರ್ಣರೂಪದಲ್ಲಿ ಉಚಿತವಾಗಿ ಲಭಿಸಲಿದೆ ಎಂದು ಅವರು ನುಡಿದರು.



