ಮಂಜೇಶ್ವರ: ಸುಭಿಕ್ಷ ಕೇರಳ ಯೋಜನೆಯ ಭಾಗವಾಗಿ, ಕುಟುಂಬಶ್ರೀ ಜೆಎಲ್‍ಜಿ ಸಮೂಹ ಮತ್ತು ಮಂಜೇಶ್ವರ ಕೃಷಿ ಭವನದ ಸಹಯೋಗದೊಂದಿಗೆ ಕುಂಜತ್ತೂರು ಮಡಿವಾಲ್ ಪಾಲ್ ನಲ್ಲಿ ಸುಮಾರು ನಾಲ್ಕು ಎಕರೆ ಬಂಜರು ಭೂಮಿಯಲ್ಲಿ ಭತ್ತದ ಕೃಷಿ ಮತ್ತು ತರಕಾರಿ ಕೃಷಿಯನ್ನು ಪ್ರಾರಂಭಿಸಲಾಗಿದೆ. ಕೃಷಿ ವ್ಯವಸ್ಥೆಯಲ್ಲಿ ಯುವ ಜನರನ್ನು ಪಾಲ್ಗೊಳಿಸುವುದು ಮತ್ತು ಪ್ರೋತ್ಸಾಹಿಸುವುದು ಈ ಯೋಜನೆಯ ಲಕ್ಷ್ಯವಾಗಿದೆ.
ವಿಸ್ತಾರವಾದ ಬಂಜರು ಭೂಮಿಯನ್ನು ಈಗ ಕೃಷಿ ಭೂಮಿಯಾಗಿ ಪರಿವರ್ತಿಸಲಾಗುತ್ತಿದೆ. ಮಂಜೇಶ್ವರದಲ್ಲಿರುವ ಕುಟುಂಬಶ್ರೀ ಜೆಎಲ್‍ಜಿ ಸಮೂಹದ ಸದಸ್ಯರ ಮುತ್ತುವರ್ಜಿಯಿಂದ ಇಂತಹದೊಂದು ಯತ್ನ ಸಾಗಿದೆ.
ಹಲವು ವರ್ಷಗಳಿಂದ ಬಂಜರು ಪ್ರದೇಶವಾಗಿದ್ದ ನಾಲ್ಕು ಎಕರೆ ಭೂಮಿಯಲ್ಲಿ ಕೃಷಿಯ ಹೊಸ ಭರವಸೆಯನ್ನು ಕಾಣಲಾಗುತ್ತಿದೆ. ಕೋವಿಡ್ ಮಾನದಂಡಗಳನ್ನು ಅನುಸರಿಸಿ ಆಹಾರ ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಸುಭಿಕ್ಷ ಕೇರಳ ಯೋಜನೆಯಡಿ ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಲಾಗುತ್ತಿದೆ. ಸರ್ಕಾರದ ಯೋಜನೆಯನ್ನು ಸಾರ್ವಜನಿಕ ವಲಯದಿಂದ ವ್ಯಾಪಕವಾಗಿ ಪ್ರಶಂಸಿಸಲಾಗಿದೆ. ಮಂಜೇಶ್ವರ ಗ್ರಾಮ. ಪಂ. ವ್ಯಾಪ್ತಿಯಲ್ಲಿರುವ ಐದು ಎಕರೆ ಭೂಮಿಯಲ್ಲಿ ಈಗಾಗಲೇ ಮೂವತ್ತು ಎಕರೆ ಜಮೀನು ಮತ್ತು ಹಸಿರು ತರಕಾರಿ ಕೃಷಿಯನ್ನು ಭತ್ತದ ಕೃಷಿ ಪ್ರಾರಂಭಿಸಲಾಗಿದೆ. ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವ ರೈತನಿಗೆ ಸರ್ಕಾರ ನಿರ್ದೇಶಿಸಿದಂತೆ ಎಕರೆಗೆ ಮೂವತ್ತೈದು ಸಾವಿರ ರೂ. ಮತ್ತು ಬಂಜರು ಜಮೀನಿನ ಮಾಲೀಕರಿಗೆ ಎಕರೆಗೆ ಐದು ಸಾವಿರ ರೂಪಾಯಿ ಧನ ಸಮಾಯವೂ ಲಭಿಸಲಿದೆ. ಅಧಿಕಾರಿಗಳು ಮಂಜೇಶ್ವರದ ಹಲವಾರು ಪ್ರದೇಶಗಳಲ್ಲಿನ ಬಂಜರು ಭೂಮಿಯನ್ನು ಗುರುತಿಸಿ ಕೃಷಿ ಭವನಕ್ಕೆ ಮಾಹಿತಿ ನೀಡುತ್ತಿದ್ದಾರೆ.ಬಳಿಕ ಕೃಷಿ ಅಧಿಕಾರಿಗಳು ಅದನ್ನು ಗುರುತಿಸಿ ಮುಂದಿನ ಯೋಜನೆಗೆ ಪೆÇ್ರೀತ್ಸಾಹ ನೀಡುತ್ತಿದ್ದಾರೆ.
ವಾರ್ಡ್ ಸದಸ್ಯೆ ಶೋಭಾ ಶೆಟ್ಟಿ, ಸ್ಥಳೀಯ ಕೃಷಿಕ ರಾಮ ಮೂಲ್ಯ, ಕೃಷಿ ಅಧಿಕಾರಿಗಳಾದ ರಾಮಚಂದ್ರ, ಶಶಿಧರ್, ಪ್ರಣವ್, ಕುಟುಂಬಶ್ರೀ ಜೆಎಲ್‍ಜಿ ಸಮೂಹದ ಪದಾಧಿಕಾರಿಗಳಾದ ಜನಾರ್ಧನ ಪೂಜಾರಿ, ಜಯಶ್ರೀ, ಭಾರತಿ, ಸರಿತಾ, ಯಶೋಧ, ಯಮುನಾ ಮುಂತಾದವರು ಭತ್ತ ಮತ್ತು ತರಕಾರಿ ಕೃಷಿಗಳ ಮೇಲ್ವಿಚಾರಣೆ ನಿರ್ವಹಿಸುತ್ತಿದ್ದಾರೆ.
ಅಭಿಮತ:
1) ವಾರ್ಡ್ ಸದಸ್ಯೆ ಶೋಭಾ ಶೆಟ್ಟಿ ಈ ಬಗ್ಗೆ ಮಾತನಾಡಿ, ಇಲ್ಲಿ ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವ ಸರ್ಕಾರದ ಸುಭಿಕ್ಷ ಕೇರಳ ಯೋಜನೆಯಿಂದ ನಮಗೆ ಸ್ಫೂರ್ತಿ ಲಭಿಸಿದೆ. ಸರ್ಕಾರದ ಈ ಮಹತ್ತರ ಯೋಜನೆಯು ನಮ್ಮನ್ನು ಇನ್ನಷ್ಟು ಪ್ರೇರಣೆ ನೀಡಿದೆ.
2) ಜೆಎಲ್‍ಜಿ ಸದಸ್ಯೆ ಯಶೋಧಾ ಮಾತನಾಡಿ, ನನಗೆ ಕೃಷಿಯಲ್ಲಿ ತುಂಬಾ ಆಸಕ್ತಿ ಇದೆ. ಈಗ ಕೋವಿಡ್ ಅವಧಿಯಲ್ಲಿ ಬಂಜರು ಭೂಮಿಯನ್ನು ಹಸಿರಾಗಿಸ ಹೊರಟಿರುವುದು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು.
3) ಸ್ಥಳೀಯ ಕೃಷಿಕರಾದ ರಾಮ ಮೂಲ್ಯ ಪ್ರತಿಕ್ರಿಯಿಸಿ ರೈತರ ರಕ್ಷಣೆಗೆ ಸರ್ಕಾರ ಮುಂದಾಗುತ್ತಿರುವುದು ಶ್ಲಾಘನೀಯ ಎಂದರು.


