ನವದೆಹಲಿ : ಲಡಾಖ್ ಸಂಘರ್ಷದಲ್ಲಿ ಭಾರತದ 20 ಯೋಧರನ್ನು ಹತ್ಯೆಗೈದ ಚೀನಾದೊಂದಿಗೆ ಮಾತುಕತೆ ನಡೆಯುತ್ತದೆ ಎಂದಾದರೆ ಪಾಕಿಸ್ತಾನದ ಜೊತೆಗೆ ಯಾಕೆ ಮಾತುಕತೆ ನಡೆಯಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಕೇಂದ್ರ ಸರ್ಕಾವನ್ನು ಪ್ರಶ್ನಿಸಿದ್ದಾರೆ.
ಗೃಹ ಬಂಧನದಿಂದ ಬಿಡುಗಡೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ ಅವರು, ಭಾರತದ 20 ಯೋಧರನ್ನು ಬಲಿ ಪಡೆದ ಚೀನಾದೊಂದಿಗೆ ಲಡಾಖ್ ಗಡಿ ವಿಚಾರದಲ್ಲಿ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತದೆ. ಆದರೆ ನಮ್ಮ ನೆರೆಯ ಮತ್ತೊಂದು ದೇಶ (ಪಾಕಿಸ್ತಾನ)ದೊಂದುಗೆ ಯಾಕೆ ಮಾತುಕತೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಣಿವೆಯಲ್ಲಿ ಹಿಂಸಾಚಾರ ನಡೆಯುವುದನ್ನು ತಡೆಯಬೇಕಾದರೆ ಪಾಕ್ನೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸುವುದು ಮುಖ್ಯವಾಗಿದೆ. ಭಾರತ - ಪಾಕ್ನಲ್ಲಿ ನಡೆಯುತ್ತಿರುವ ನಿರಂತರ ಸಂಘರ್ಷದಿಂದಾಗಿ ನಮ್ಮ ಜನಸಾಮಾನ್ಯರು ಮೃತರಾಗುತ್ತಿದ್ದಾರೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆಯನ್ನು ನಿಲ್ಲಿಸಬೇಕು ಎಂದು ಹೇಳಿರುವ ಅವರು ಇದು ರಾಜತಾಂತ್ರಿಕ ಮಾತುಕತೆಯಿಂದ ಸಾಧ್ಯ ಎಂದಿದ್ದಾರೆ.
ಇದೇ ವೇಳೆ ದೇಶದ ಬೇರೆಡೆಯಲ್ಲಿ ಇರುವ ಹಕ್ಕು ಕಾಶ್ಮೀರಕ್ಕೂ ಬೇಕು ಎಂದು ಒತ್ತಾಯಿಸಿದ ಅವರು, ದೇಶದ ಇತರೆಡೆ ಪ್ರಗತಿಯಾಗುತ್ತದೆ. ಆದರೆ ಜಮ್ಮು ಕಾಶ್ಮೀರದಲ್ಲಿ ಪ್ರಗತಿ ಕಾರ್ಯಗಳೇ ಇಲ್ಲ. ದೇಶದ ಇತರೆ ಪ್ರದೇಶದಲ್ಲಿ ಇರುವಂತೆ ನಮ್ಮ ಮಕ್ಕಳಿಗೆ 4ಜಿ ಸೌಲಭ್ಯ ಇಲ್ಲ. ಎಲ್ಲರೂ ಆನ್ಲೈನ್ ತರಗತಿಯನ್ನು ಅವಲಂಬಿಸಿರುವಾಗ ನಮ್ಮ ಜಮ್ಮು ಕಾಶ್ಮೀರದ ಮಕ್ಕಳು ಓದುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಭಾರತ ಪ್ರಗತಿ ಹೊಂದಲು ಇತರೆ ಪ್ರದೇಶಗಳಂತೆ ಜಮ್ಮು ಕಾಶ್ಮೀರ ಕೂಡಾ ಪ್ರಗತಿ ಸಾಧಿಸುವ ಹಕ್ಕನ್ನು ಹೊಂದಿಲ್ಲವೇ ಎಂದು ಕೇಂದ್ರವನ್ನು ಕೇಳಿದರು.