ಕಾಸರಗೋಡು: ಬ್ರಹ್ಮೈಕ್ಯರಾದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಪ್ರಥಮ ಆರಾಧನಾ ಉತ್ಸವ ಮಂಗಳವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮಂಗಳವಾರ ಬೆಳಿಗ್ಗೆ ಸಂಕರ್ಷಣಾದಿ ಹವನ, ಪುರುಷಸೂಕ್ತ ಹವನ, ರುದ್ರ ಹವನ ಸಹಿತ ವಿಧಿವಿಧಾನಗಳು ನಡೆಯಿತು.
ಅಪರಾಹ್ನ ಶ್ರೀಗಳ ಸ್ಮರಣಾರ್ಥ ಯಕ್ಷ ಗಾನಾರ್ಚನೆ ಸಮರ್ಪಣೆಗೊಂಡಿತು. ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಪುತ್ತೂರು ರಮೇಶ್ ಭಟ್, ಹೊಸಮೂಲೆ ಗಣೇಶ ಭಟ್, ತಲ್ಪನಾಜೆ ವೆಂಕಟರಮಣ ಭಟ್ ಭಟ್, ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ ಭಾಗವತರಾಗಿ ಮತ್ತು ಪದ್ಯಾಣ ಶಂಕರನಾರಾಯಣ ಭಟ್, ಚೈತನ್ಯಕೃಷ್ಣ ಪದ್ಯಾಣ, ಕೃಷ್ಣ ಪ್ರಕಾಶ ಉಳತ್ತಾಯ, ಲವಕುಮಾರ್ ಐಲ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.
ಇಂದು ಬೆಳಿಗ್ಗೆ ಆರಾಧನೆ, ಯತಿಪೂಜೆ, ಮಂತ್ರಾಕ್ಷತೆಗಳು ನಡೆಯಲಿವೆ.
ಅಪರಾಹ್ನ ಶ್ರೀಗಳ ಸ್ಮರಣಾರ್ಥ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಸೇವೆ ನಡೆಯಲಿದೆ.
ಸೋಮವಾರ ನಾಲ್ಕು ವೇದಗಳು, ಭಾಗವತ, ಬ್ರಹ್ಮಸೂತ್ರಗಳ ಪಾರಾಯಣ ವಿಧಿವಿಧಾನಗಳು ಋತ್ವಿಜರ ನೇತೃತ್ವದಲ್ಲಿ ನೆರವೇರಿತು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಮಾನದಂಡಗಳಿಗೆ ಅನುಸಾರ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




