ತಿರುವನಂತಪುರ: ಆರು ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಮಾನ ನಿಲ್ದಾಣಗಳ ಮೂಲಕ ವಿದೇಶಿ ಸರಕು ಹಾರಾಟವನ್ನು ಕೇಂದ್ರ ಸರ್ಕಾರ ನಿಷೇಧಿಸಿರುವುದು ಕೇರಳದ ರಫ್ತಿಗೆ ಅಡ್ಡಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಪ್ರಧಾನಿಗೆ ಪತ್ರ ಮುಖೇನ ಕಳುಹಿಸಿದ್ದಾರೆ. ನಿಷೇಧವನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಚಾಂಡಿ ಒತ್ತಾಯಿಸಿದ್ದಾರೆ.
ಪ್ರಸ್ತುತ ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿಗೆ ಮಾತ್ರ ಸರಕು ವಿಮಾನಗಳ ಹಾರಾಟಕ್ಕೆ ಅನುಮತಿಸಲಾಗಿದೆ. ತಿರುವನಂತಪುರ ಮತ್ತು ಕೊಚ್ಚಿಯಿಂದ ಎಮಿರೇಟ್ಸ್ ಮತ್ತು ಕತಾರ್ ಏರ್ವೇಸ್ ಸರಕು ಸೇವೆಗಳನ್ನು ತಡೆಹಿಡಿಯಲಾಗಿದೆ. ಇದರೊಂದಿಗೆ ಕೇರಳದಿಂದ ಮಸಾಲೆಗಳು, ಹಣ್ಣುಗಳು, ತರಕಾರಿಗಳು, ಮೀನು ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳ ರಫ್ತು ಶೇಕಡಾ 80 ರಷ್ಟು ಕಡಿಮೆಯಾಗಿದೆ.
ಪ್ರವಾಹ ಮತ್ತು ಕೋವಿಡ್ ಸೋಂಕು ತೀವ್ರವಾಗಿ ಕಂಗೆಡಿಸಿರುವ ಕೇರಳದ ಕೃಷಿ ಕ್ಷೇತ್ರಕ್ಕೆ ಇದು ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಕೇರಳದಿಂದ ಉತ್ಪನ್ನಗಳು ಲಭ್ಯವಿಲ್ಲದ ಕಾರಣ ವಿದೇಶಿಯರೂ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಕೊಲ್ಲಿಯಲ್ಲಿರುವ ವಿದೇಶಿ ಕೇರಳಿಗರು ತಮ್ಮ ಜೀವನೋಪಾಯಕ್ಕಾಗಿ ಸ್ಥಳೀಯ ಕೇರಳ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ.
ದೇಶಕ್ಕೆ ಹೆಚ್ಚಿನ ಪ್ರಮಾಣದ ವಿದೇಶಿ ವಿನಿಮಯವನ್ನು ಗಳಿಸುವ ಆರ್ಥಿಕ ಪ್ರಕ್ರಿಯೆಯು ಸ್ಥಗಿತಗೊಂಡಿದೆ ಎಂದು ಉಮ್ಮನ್ ಚಾಂಡಿ ಪತ್ರದಲ್ಲಿ ಬೊಟ್ಟುಮಾಡಿ, ಶೀಘ್ರ ನಿಯಂತ್ರಣ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.





