ನವದೆಹಲಿ: ಅನಿವಾಸಿ ಭಾರತೀಯರಿಗೆ ಅಂಚೆ ಮತದಾನ ಹಕ್ಕು ನೀಡುವ ಕುರಿತು ಚುನಾವಣಾ ಆಯೋಗವು ಪ್ರಸ್ತಾಪಿಸಿದ್ದು, ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರು ಈ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಮೆರಿಕಾ, ಕೆನಡಾ, ನ್ಯೂಜಿಲೆಂಡ್, ಜಪಾನ್, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾದಲ್ಲಿರುವ ಅನಿವಾಸಿ ಭಾರತೀಯರಿಗೆ ಮೊದಲು ಈ ಹಕ್ಕು ಮೊದಲು ದೊರೆಯಲಿದೆ ಎಂದು ವರದಿ ಮಾಡಿದೆ.
ಮೊದಲ ಹಂತದಲ್ಲಿ ಅಂಚೆ ಮತದಾನ ಹಕ್ಕು ಗಲ್ಫ್ ದೇಶಗಳಲ್ಲಿರುವ ಎನ್'ಆರ್'ಐಗಳಿಗೆ ದೊರೆಯುವ ಸಾಧ್ಯತೆ ಕಡಿಮೆಯಾಗಿದ್ದು ಪ್ರಜಾಪ್ರಭುತ್ವವಲ್ಲದ ದೇಶಗಳಲ್ಲಿ ಅಲ್ಲಿನ ಭಾರತೀಯ ನಾಗರಿಕರಿಗೆ ಅಂಚೆ ಮತದಾನಕ್ಕೆ ಅನುಮತಿಸುವಂತೆ ಕೇಳಲು ಸಚಿವಾಲಯಕ್ಕೆ ಸ್ವಲ್ಪ ಹಿಂಜರಿಕೆಯಿದೆ ಎನ್ನಲಾಗಿದೆ.
ಕಳೆದ ವಾರ ಚುನಾವಣಾ ಆಯೋಗ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಡೆಸಿದ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆಯೆನ್ನಲಾಗಿದ್ದು, ಅನಿವಾಸಿ ಭಾರತೀಯರಿಗೆ ಅಂಚೆ ಮತದಾನ ಹಕ್ಕು ಚಲಾಯಿಸಲು ವಿದೇಶಗಳಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಗಳಲ್ಲಿ ಸೂಕ್ತ ಸಿಬ್ಬಂದಿಯ ಏರ್ಪಾಟು ನಡೆಸುವ ಕುರಿತೂ ಚರ್ಚೆ ನಡೆಸಲಾಗಿದೆ.
ಸದ್ಯ ವಿದೇಶಗಳಲ್ಲಿರುವ ಭಾರತೀಯರು ತಮ್ಮ ಸ್ವಕ್ಷೇತ್ರಗಳಿಗೆ ಆಗಮಿಸಿದರಷ್ಟೇ ಮತದಾನ ಮಾಡುವುದು ಸಾಧ್ಯ. ಇದೇ ಕಾರಣದಿಂದ ವಿದೇಶಗಳಲ್ಲಿರುವ ಭಾರತೀಯರ ಪೈಕಿ ಒಂದು ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಮಂದಿ ಮಾತ್ರ ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದು ಇವರಲ್ಲಿ ಗರಿಷ್ಠ ಮಂದಿ ಕೇರಳದವರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಚುನಾವಣಾ ಆಯೋಗದ ಈ ನಡೆಯ ಕುರಿತಾದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರು ಮತ್ತು ಗಲ್ಫ್ ಅನಿವಾಸಿ ಭಾರತೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ 'ಚುನಾವಣಾ ಆಯೋಗವು ಗಲ್ಫ್ ರಾಷ್ಟ್ರಗಳನ್ನು ಹೊರತುಪಡಿಸಿ ಇತರ ರಾಷ್ಟ್ರಗಳಿಗೆ ಅಂಚೆ ಮತದಾನದ ಹಕ್ಕು ನೀಡಿದ್ದು ನಿಜಕ್ಕೂ ಅಚ್ಚರಿದಾಯಕವಾಗಿದೆ. ಪಶ್ಚಿಮ ಬಂಗಾಳ, ಕೇರಳ ಮತ್ತು ಮತ್ತು ತಮಿಳುನಾಡಿನಲ್ಲಿ ಚುನಾವಣೆ ಪ್ರಾರಂಭವಾಗಲಿದ್ದು, ಅಲ್ಲಿನ ಬಿಜೆಪಿ ವಿರೋಧಿ ಮತಗಳನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.





