ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಕೆವೈಸಿ ಕೇಳುವ ನೆಪದಲ್ಲಿ ಹೆಚ್ಚಿರುವ ಮೋಸದ ಜಾಲದ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಚ್ಚರಿಕೆ ನೀಡಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಈ ಮೋಸ ಜಾಲದ ವ್ಯಾಪ್ತಿ ದೇಶಾದ್ಯಂತ ಬೆಳೆಯುತ್ತಿದೆ. ಬ್ಯಾಂಕ್ ಅಧಿಕಾರಿಗಳಂತೆ ನಟಿಸಿ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಎಸ್‌ಬಿಐ ಗ್ರಾಹಕರನ್ನು ಎಚ್ಚರಿಸಿದೆ.
ಬ್ಯಾಂಕ್ ಅಧಿಕಾರಿಗಳಂತೆ ಕರೆ ಮಾಡುವ ಇವರು ಜನರಿಗೆ ನಂಬಿಸಿ ಕೆವೈಸಿ ಅಪ್‌ಡೇಟ್ ಮಾಡುವ ಅಗತ್ಯವಿದೆ ಎಂದು ಹೇಳುವ ಮೂಲಕ ಮಾಹಿತಿ ಪಡೆದು ಆನ್‌ಲೈನ್‌ನಲ್ಲಿ ಖಾತೆಯನ್ನು ಹ್ಯಾಕ್ ಮಾಡಲಾಗುತ್ತಿದೆ. ಹೀಗಾಗಿ ಎಸ್‌ಬಿಐ ಕೆವೈಸಿ ಪರಿಶೀಲನೆಗಾಗಿ ವಿನಂತಿಸುವ ಮೋಸದ ಕರೆಗಳ ವಿರುದ್ಧ ಎಚ್ಚರಿಕೆ ನೀಡಿದೆ.
"ಕೆವೈಸಿ ಪರಿಶೀಲನೆಗಾಗಿ ವಿನಂತಿಸುವ ಮೋಸದ ಕರೆಗಳು ಅಥವಾ ಸಂದೇಶಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ." ಎಂದು ಎಸ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ.
ಹ್ಯಾಕರ್ಸ್‌ಗಳಿಂದ ಮೋಸ ಹೋಗದಿರಲು ಎಸ್‌ಬಿಐ ಏಳು ಸುರಕ್ಷತಾ ಸಲಹೆಗಳನ್ನು ನೀಡಿದ್ದು, ಅವುಗಳು ಈ ಕೆಳಕಂಡಂತಿದೆ:
1) ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
2) ದೂರದಿಂದಲೇ ಕಾರ್ಯನಿರ್ವಹಿಸಬಹುದಾದ ಅಪ್ಲಿಕೇಶನ್‌ಗಳನ್ನು ಕಟ್ಟುನಿಟ್ಟಾಗಿ ದೂರವಿಡಿ.
3) ಆಧಾರ್ ನಕಲನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ
4) ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಿಮ್ಮ ಇತ್ತೀಚಿನ ಫೋನ್ ಮತ್ತು ಸಂಪರ್ಕದ ವಿವರಗಳನ್ನು ಅಪ್‌ಡೇಟ್ ಮಾಡಿ
5) ನಿಮ್ಮ ಪಾಸ್‌ವರ್ಡ್ ಅನ್ನು ಆದಷ್ಟು ಬದಲಾಯಿಸುತ್ತಿರಿ.
6) ನಿಮ್ಮ ಮೊಬೈಲ್ ಮತ್ತು ಗೌಪ್ಯ ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
7) ನೀವು ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು ಯೋಚಿಸಿ.





